ಮಂಗಳೂರು, ನ.14(DaijiworldNews/AA): ಕೈಕಂಬ ಸಮೀಪದ ಸ್ಕಂದನಗರದ ನಿವಾಸಿಯೊಬ್ಬರು ಪದೇ ಪದೇ ರಸ್ತೆ ಅಗೆಯುತ್ತಿರುವುದನ್ನು ವಿರೋಧಿಸಿ ಹಾಗೂ ಕೈಕಂಬ ಮತ್ತು ಸ್ಕಂದನಗರದ ನಡುವಿನ ರಸ್ತೆಯನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಬ್ಯಾನರ್ಗಳನ್ನು ಹಾಕಲಾಗಿದೆ.
ಕೇಬಲ್ ಹಾಕುವುದು, ನೀರಿನ ಪೈಪ್ ಲೈನ್ ಹಾಕುವುದು ಹೀಗೆ ನಾನಾ ಉದ್ದೇಶಗಳಿಗಾಗಿ ರಸ್ತೆಯನ್ನು ಆಗಾಗ ಅಗೆಯಲಾಗುತ್ತದೆ. ಆದರೆ ಪ್ರತಿ ಬಾರಿ ರಸ್ತೆಯನ್ನು ಅಗೆದ ನಂತರ ಒಳಚರಂಡಿ ವ್ಯವಸ್ಥೆಯನ್ನು ತೆಗೆದುಹಾಕಲಾಗುತ್ತದೆ. ಜೊತೆಗೆ ರಸ್ತೆಯ ಅಪೂರ್ಣ ಕೆಲಸದಿಂದಾಗಿ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗುತ್ತಿದೆ.
ಸ್ಥಳೀಯ ಶಾಸಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರದೇಶಕ್ಕೆ ಭೇಟಿ ನೀಡುವಲ್ಲಿ ವಿಫಲರಾಗಿದ್ದಾರೆ. ರಾಜಕಾರಣಿಗಳು ಕೇವಲ ಚುನಾವಣಾ ಸಮಯದಲ್ಲಿ ಮತ ಕೇಳಲು ಬರುತ್ತಾರೆ ಎಂದು ಸ್ಥಳೀಯ ನಿವಾಸಿಗಳು ಎಂದು ಆರೋಪಿಸಿದ್ದಾರೆ.
ಈ ಕುರಿತಾಗಿ ಸ್ಥಳೀಯ ನಿವಾಸಿಗಳು ಬ್ಯಾನರ್ ಗಳನ್ನು ರಸ್ತೆಯಲ್ಲಿ ಕಟ್ಟಿದ್ದಾರೆ. 'ಯಾರೋ ಮಾಂತ್ರಿಕರು ಕೈಕಂಬದಿಂದ ಸ್ಕಂದನಗರ ವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಸ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿ ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೆಯೇ ಬಿಟ್ಟಿದ್ದಾರೆ. ಸವಾರರು ನಿಧಾನವಾಗಿ ಚಲಿಸಿ' ಎಂದು ವ್ಯಂಗ್ಯವಾಗಿ ಈ ಬ್ಯಾನರ್ ನಲ್ಲಿ ಬರೆಯಲಾಗಿದೆ.
ಇನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂಬುದು ನಿವಾಸಿಗಳ ಆಗ್ರಹ. ಪದೇ ಪದೇ ಅಗೆಯುವುದರಿಂದ ರಸ್ತೆ ಕಿರಿದಾಗಿದ್ದು, ಅಪಾಯಕರವಾಗಿದ್ದು, ಅಪಘಾತಗಳಳು ಉಂಟಾಗುವ ಸಾಧ್ಯತೆ ಇದೆ.