ಮಣಿಪಾಲ, ನ.14(DaijiworldNews/AA): ಅಸುರಕ್ಷಿತವಾಗಿ ಡಾಮರು, ಜಲ್ಲಿ ಸಾಗಿಸುತ್ತಿದ್ದ ಕೇರಳ ನೋಂದಣಿಯ ಲಾರಿಯೊಂದನ್ನು ಮಣಿಪಾಲ ಠಾಣಾ ಪೊಲೀಸರು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜಲ್ಲಿ ತುಂಬಿಸಿಕೊಂಡು ಪೆರಂಪಳ್ಳಿ ರಸ್ತೆ ಮೂಲಕ ಲಾರಿ ಸಾಗುತ್ತಿತ್ತು. ಈ ವೇಳೆ ಜಲ್ಲಿಗಳು ರಸ್ತೆಗೆ ಬಿದ್ದು, ಇತರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಬಾಗಿಲು ಕಡೆಗೆ ಹೋಗುತಿದ್ದ ಈ ಲಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಚಾಲಕ ಸೂಚನೆ ಧಿಕ್ಕರಿಸಿ ಲಾರಿಯನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ಲಾರಿಯನ್ನು ಬೆನ್ನಟ್ಟಿದ ಪೊಲೀಸರು ಕಕ್ಕುಂಜೆ ರೈಲ್ವೇ ಸೇತುವೆಯ ಬಳಿ ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಲಾರಿ ಚಾಲಕ ಸಂಗನಗೌಡ ಪಾಟೀಲ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.