ಮಂಗಳೂರು,ನ.11(DaijiworldNews/AK): ತಲಪಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಕೆಸಿ ರಸ್ತೆ-ಉಚ್ಚಿಲ ಮಾರ್ಗದ ಬಳಿ ನವೆಂಬರ್ 8ರಂದು ನಡೆದಿದ್ದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಬಡಾಜೆ ಕಡಂಬಾರ್ ಶಾಲೆಯ ಬಳಿಯ ಫಾತಿಮಾ ಮಂಜಿಲ್ ನಿವಾಸಿ ಇಸ್ಮಾಯಿಲ್ ಅವರ ಪುತ್ರ ಮೊಹಮ್ಮದ್ ಆಸಿಫ್ (33) ಮಂಗಳೂರಿನಿಂದ ಕೇರಳಕ್ಕೆ ಕುಟುಂಬ ಸಮೇತ ಮನೆಗೆ ತೆರಳುತ್ತಿದ್ದಾಗ ರಾತ್ರಿ 7:40 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆತನನ್ನು ಕೊಲ್ಲುವ ಉದ್ದೇಶದಿಂದ ದಾಳಿಕೋರರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ನವೆಂಬರ್ 9 ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 109(1), 189(2), 190, 191(2), 191(3), 324(3) ಮತ್ತು ಬಿಎನ್ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತ ಆರೋಪಿಗಳಾದ ಸುರತ್ಕಲ್ನ ಇಡ್ಯ ಈಶ್ವರನಗರ ನಿವಾಸಿ ಹನುಮಂತ್ ಎಂಬವರ ಪುತ್ರ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು (24) , ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ನಾರ್ಲ ಪಡೀಲ್ ನ ಭಗವತಿ ನಿಲಯ ನಿವಾಸಿ ಮಂಜುನಾಥ್ ಎಂಬವರ ಪುತ್ರ ಸಚಿನ್ (24), ಬಂಟ್ವಾಳ ತಾಲೂಕಿನ ಪಜೀರ್ ಪೋಸ್ಟ್ ಕಂಬ್ರಪದವು ಪಡಲಕೋಡಿ ನಿವಾಸಿ ಚಂದ್ರಶೇಖರ ಎಂಬವರ ಪುತ್ರ ಕುಶಿತ್ (18) ಎಂಬಾತನನ್ನು ಬಂಧಿಸಲಾಗಿದೆ.
ನವೆಂಬರ್ 11 ರಂದು ಬೆಳಿಗ್ಗೆ ಬಂಧಿಸಲಾಯಿತು. ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಐಪಿಎಸ್, ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಸಿದ್ಧಾರ್ಥ್ ಗೋಯೆಲ್ ಮತ್ತು ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ. ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಧನ್ಯ ಎನ್ ನಾಯಕ್ ನೇತೃತ್ವದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಾಲಕೃಷ್ಣ ಹೆಚ್ ಎನ್ ಮತ್ತು ಇತರ ಸಿಬ್ಬಂದಿಗಳ ಬೆಂಬಲದೊಂದಿಗೆ ಕಾರ್ಯಾಚರಣೆ ನಡೆಯಿತು.