ಉಳ್ಳಾಲ,ನ.11(DaijiworldNews/TA):ಇತ್ತೀಚೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಉಳ್ಳಾಲದ ವಿಶ್ವ ಹಿಂದು ಪರಿಷತ್ ಮುಖಂಡ ಅರ್ಜುನ್ ಮಾಡೂರು ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲುಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಕೇರಳ ಮೂಲದ ಆರೋಪಿಯಿದ್ದ ಕಾರೊಂದರ ಮೇಲೆ ಹೆಲ್ಮೆಟ್ ಧರಿಸಿದ ಎಂಟು ಮಂದಿ ದುಷ್ಕರ್ಮಿಗಳ ತಂಡ ರಾಷ್ಟ್ರೀಯ ಹೆದ್ದಾರಿ 66 ರ ಕೆ.ಸಿ.ರೋಡ್- ಉಚ್ಚಿಲ ಜಿಯೋ ಪೆಟ್ರೋಲ್ ಪಂಪ್ ಎದುರುಗಡೆ ದಾಳಿಗೆ ಯತ್ನಿಸಿದ ಘಟನೆ ನ.7 ರ ತಡರಾತ್ರಿ ವೇಳೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಆದಿತ್ಯವಾರ ಪ್ರಕರಣ ದಾಖಲಾಗಿದೆ. ಅ.17 ರಂದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಸಮೀಪ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಶರತ್ ಕುಂಪಲ ಎಂಬವರ ಪರವಾಗಿ ಉಳ್ಳಾಲದ ಹಿಂದೂ ಮುಖಂಡ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇತ್ಯರ್ಥಕ್ಕೆ ತೆರಳಿದ್ದರು. ಈ ಸಂದರ್ಭ ಅಪಘಾತದ ಪ್ರಕರಣದಲ್ಲಿ ಶರತ್ ಅವರ ಎದುರಾಳಿಯಾಗಿದ್ದ ಕೇರಳ ಹೊಸಂಗಡಿ ನಿವಾಸಿ ಆಸೀಫ್ ಜೊತೆ ಮಾತಿಗೆ ಮಾತು ಬೆಳೆದು ಅರ್ಜುನ್ ಮೇಲೆ ಹಲ್ಲೆ ನಡೆದಿತ್ತು. ಪ್ರಕರಣ ಸಂಬಂಧ ರಾತ್ರೋರಾತ್ರಿ ಹಿಂದು ಸಂಘಟನೆ ಕಾರ್ಯಕರ್ತರು ಉಳ್ಳಾಲ ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದ್ದರು. ಪರಿಣಾಮವಾಗಿ ಆರೋಪಿತ ಆಸೀಫ್ ನನ್ನು ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ನ.7 ರಂದು ಆರೋಪಿ ಅಸೀಫ್ ಜಾಮೀನು ದೊರೆತಿದ್ದು , ಕೇರಳದ ಹೊಸಂಗಡಿ ಮನೆಗೆ ಮಂಗಳೂರು ಜೈಲಿನಿಂದ ಬಿಡುಗಡೆಗೊಂಡು ಕಾರಿನಲ್ಲಿ ತೆರಳುತ್ತಿದ್ದರು. ತಡರಾತ್ರಿ 9.30 ರ ಸುಮಾರಿಗೆ ಕಾರು ಕೆ.ಸಿ.ರೋಡ್ ತಲುಪುತ್ತಿದ್ದಂತೆ ನಾಲ್ಕು ಬೈಕ್ ಗಳಲ್ಲಿ ಬಂದ ಎಂಟು ಮಂದಿ ಹೆಲ್ಮೆಟ್ ಧಾರಿಗಳ ತಂಡ ಕಾರಿಗೆ ಅಡ್ಡಗಟ್ಟಿದ್ದಾರೆ. ಎಲ್ಲರ ಕೈಯಲ್ಲೂ ಮೊಟ್ಟೆ ಹಾಗೂ ತಲವಾರುಗಳಿತ್ತು ಎಂದು ಆರೋಪಿಸಲಾಗಿದೆ. ಈ ಪೈಕಿ ಒಂದು ಬೈಕಿನಲ್ಲಿದ್ದವರು ಬೀಸಿದ ತಲವಾರು ಆಸೀಫ್ ಇದ್ದ ಕಾರಿಗೆ ತಗಲಿದೆ. ಕಾರಿನ ಗಾಜಿಗೆ ಹಾನಿಯಾಗಿದೆ. ಬೈಕುಗಳಲ್ಲಿದ್ದ ಆಗಂತುಕರು ಹಿಂಬಾಲಿಸಲು ಆರಂಭಿಸಿದಾಗ ತಲಪಾಡಿ ಟೋಲ್ಗೇಟ್ ನ ತಡೆಗೋಡೆಗೂ ಬಡಿದು ರಕ್ಷಣೆಗಾಗಿ ನೇರವಾಗಿ ಕಾರಿನಲ್ಲಿ ತೆರಳಿದ್ದಾರೆ. ಬಳಿಕ ಮಂಜೇಶ್ವರ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದರು. ಘಟನೆ ನಡೆದ ಎರಡು ದಿನಗಳ ಬಳಿಕ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.