ಮಂಗಳೂರು,ನ.10(DaijiworldNews/TA):ವ್ಯಕ್ತಿಯೊಬ್ಬ ಕೈಯಲ್ಲಿ ಮಗು ಹಿಡಿದುಕೊಂಡು ಸೇತುವೆ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರು ಹೊರವಲಯದ ಗುರುಪುರ ಸೇತುವೆ ಬಳಿ ನಡೆದಿದೆ. ಕೈಕಂಬದ ನಿವಾಸಿ ಸಂದೀಪ್ ಎಂಬಾತ ತನ್ನ ಎರಡು ವರ್ಷದ ಮಗುವನ್ನೆತ್ತಿಕೊಂಡು ಸೇತುವೆಯ ತಡೆಗೋಡೆ ಏರಿ ಮೇಲಿಂದ ಹಾರಲು ಅಣಿಯಾಗಿದ್ದ ಎನ್ನಲಾಗಿದೆ.
ಅಲ್ಲದೆ ಸ್ಥಳದಲ್ಲಿದ್ದರು ಯಾರೂ ಕೂಡ ಮುಂದೆ ಬಾರದಂತೆ ಎಚ್ಚರಿಕೆ ಕೂಡ ನೀಡುತ್ತಿದ್ದ. ಈ ವೇಳೆ ಸಮಯ ಸಾಧಿಸಿದ ಸ್ಥಳೀಯರು ವ್ಯಕ್ತಿಯನ್ನು ಹಿಡಿದು ರಕ್ಷಿಸಿದ್ದು, ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಸಂದೀಪ್ ಬಳಿ ವಿಚಾರಿಸಿದಾಗ ತಾನು ಮಗುವಿಗೆ ಹೊಳೆ ತೋರಿಸುವ ಉದ್ದೇಶದಿಂದ ಸೇತುವೆಯ ಮೇಲೇರಿರುವುದಾಗಿ ತಿಳಿಸಿದ್ದು, ಪೊಲೀಸರು ಆತನಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆನ್ನಲಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.