ಮಂಗಳೂರು, ಡಿ 1: ನಗರದಲ್ಲಿ ಈದ್ ಮಿಲಾದ್ ಪ್ರಯುಕ್ತ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾ- ಭಕ್ತಿಯಿಂದ ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮಿಲಾದ್ ಜಾಥಾ, ಸೌಹಾರ್ದ ನಡಿಗೆ, ಮೆರವಣಿಗೆ ನಡೆಯಿತು. ಪ್ರವಾದಿ ಮುಹಮ್ಮದ್ ಜನ್ಮದಿನಾಚರಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಲಾದುನ್ನಬಿ ಆಚರಣೆ ವೈಭವದಿಂದ ನಡೆಯುತ್ತಿದೆ. ಸಂಜೆ ಮಂಗಳೂರಿನ ಕೇಂದ್ರ ಜುಮಾ ಮಸೀದಿಯಿಂದ ಬಾವುಟಗುಡ್ಡೆಯ ಈದ್ಗಾ ಮಸೀದಿಯವರೆಗೆ ಮೀಲಾದ್ ಮೆರವಣಿಗೆ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಇಂದು ಸಾರ್ವತ್ರಿಕ ಸರ್ಕಾರಿ ರಜೆ ಘೋಷಿಸಲಾಗಿದೆ.
ಸಂಸ್ಕೃತಿ, ಸಂಸ್ಕಾರಗಳ ಗಂಧ ಗಾಳಿಯೇ ಗೊತ್ತಿಲ್ಲದ ದಿನಗಳಲ್ಲಿ ಮಾನವರ ಅಭಿವೃದ್ಧಿಗಾಗಿಯೇ ಹುಟ್ಟಿಬಂದ ಪ್ರವಾದಿ ಮಹ್ಮದ್ ಪೈಗಂಬರ್ ಜನರ ನಡುವೆ ಒಬ್ಬ ದೊಡ್ಡ ಸಂತರಾಗಿ ಬದುಕು ನಿರ್ಮಿಸಿದವರು. ಹೀಗಾಗಿ ಮಿಲಾದ್ ಆಚರಣೆಯನ್ನು ಮೊಹಮ್ಮದ್ ಪೈಗಂಬರರ ಜನ್ಮ ದಿನವಾಗಿ ಆಚರಿಸುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್ ನ ರಬಿವುಲ್ ಅವ್ವಲ್ ತಿಂಗಳ ಮೊದಲ ದಿನದಿಂದ ಮಸೀದಿಗಳಲ್ಲಿ ಪೈಗಂಬರರ ಮೇಲೆ ಮೌಲೀದ್ ನಡೆಯುತ್ತದೆ. ಬಳಿಕ 12 ನೇ ದಿನ ಮಸೀದಿಯಲ್ಲಿ ವಿದ್ಯಾರ್ಥಿ ಗಳಿಂದ ಪೈಗಂಬರ್ ಅವರ ಗೀತೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ.