ನವದೆಹಲಿ: ತನ್ನ ಇಬ್ಬರು ಶಿಷ್ಯೆಯರನ್ನು ಅತ್ಯಾಚಾರ ಮಾಡಿರುವ ಆರೋಪದಲ್ಲಿ ಸದ್ಯ ಜೈಲುಪಾಲಾಗಿರುವ ರಾಮ್ ರಹೀಂ ಬಾಬಾನ ಡೇರಾ ಸಚ್ಚಾ ಸೌದಾದ ಒಳಗೆ ಏನೆಲ್ಲಾ ಇರಬಹುದೆಂದು ಜಾಲಾಡುತ್ತಿರುವ ಅಧಿಕಾರಿಗಳಿಗೆ ಶನಿವಾರದಂದು ಆಘಾತಕ್ಕಾದಿತ್ತು.
ಬಾಬಾನ ವೈಭವೋಪೇತ ಆಶ್ರಮದ ಒಳಗೆ ಅಕ್ರಮವಾಗಿ ಸ್ಫೋಟಕಗಳನ್ನು ಮತ್ತು ಪಟಾಕಿಗಳನ್ನು ತಯಾರಿಸುವ ಕಾರ್ಖಾನೆಯೊಂದು ಪತ್ತೆಯಾಗಿದ್ದು ಈ ಬಾಬಾ ಅಸಲಿಗೆ ಮಾಡುತ್ತಿದ್ದುದಾದರೂ ಏನು ಎಂಬ ಬಗ್ಗೆ ಖುದ್ದು ಅಧಿಕಾರಿಗಳಿಗೇ ಗೊಂದಲ ಮೂಡಿದೆ.
ಈ ಬಗ್ಗೆ ಮಾತನಾಡಿದ ಹರ್ಯಾಣ ಸರಕಾರದ ಸಹಾಯಕ ನಿರ್ದೇಶಕ (ಸಾರ್ವಜನಿಕ ವ್ಯವಹಾರ) ಸತೀಶ್ ಮೆಹ್ರಾ, ಬಾಬಾನ ಆಶ್ರಮದಲ್ಲಿ ಸ್ಫೋಟಕ ಮತ್ತು ಪಟಾಕಿ ತಯಾರಿಸುವ ಅಕ್ರಮ ಕಾರ್ಖಾನೆ ಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ.
ಜೊತೆಗೆ ಇಬ್ಬರು ಅಪ್ರಾಪ್ತ ಮಕ್ಕಳನ್ನೂ ಅಲ್ಲಿಂದ ರಕ್ಷಿಸಲಾಗಿದೆ. ಬಾಲಕರಲ್ಲಿ ಒಬ್ಬ ಉತ್ತರ ಪ್ರದೇಶದವನಾದರೆ ಇನ್ನೊಬ್ಬ ಖೈತಾಲ್ ನ ನಿವಾಸಿಯಾಗಿರುವುದಾಗಿ ತಿಳಿದುಬಂದಿದೆ. ಈ ಬಾಲಕರನ್ನು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಯವರ ಸುಪರ್ದಿಗೆ ನೀಡಲಾಗಿದೆ.
ಶೂಕ್ರವಾರದಂದು ಬಾಬಾನಿಗೆ ಸೇರಿದ ಕಂಪ್ಯೂಟರ್ ಗಳು, ಎಸ್ ಯುವಿ ಮತ್ತು ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಡೇರಾದ ಸುತ್ತಮುತ್ತ ಕರ್ಫ್ಯೂ ಹೇರಲಾಗಿದ್ದು ಸ್ಥಳೀಯಾಡಳಿತ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಿದೆ. ಕಾರ್ಯಾಚರಣೆಯಲ್ಲಿ ನೂರಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯಾಡಳಿತದ ಅಧಿಕಾರಿಗಳು ಶಾಮೀಲಾಗಿದ್ದಾರೆ.