ಉಡುಪಿ, ನ.09(DaijiworldNews/AA): ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ವೇಳೆ ಗರ್ಡರ್ ಎಳೆಯುತ್ತಿದ್ದ ಕ್ರೇನ್ ಮಗುಚಿ ಬಿದ್ದ ಘಟನೆ ನ.೭ರ ತಡರಾತ್ರಿ ಸಂಭವಿಸಿದೆ.
ಸ್ಟೀಲ್ ಬ್ರಿಡ್ಜ್ ನಿರ್ಮಾಣ ಸಂಬಂಧ ಗರ್ಡರ್ಗಳನ್ನು ಜೋಡಿಸುವ ಹಾಗೂ ವೆಲ್ಡಿಂಗ್ ಕಾರ್ಯ ಹಗಲಿರುಳು ನಡೆಯುತ್ತಿದೆ. ಟನ್ಗಟ್ಟಲೆ ಭಾರ ಇರುವ ಗರ್ಡರ್ಗಳನ್ನು ಎತ್ತಲು ಎರಡು ಕೇನ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗುರುವಾರ ರಾತ್ರಿ ಗರ್ಡರ್ ಎತ್ತುವ ಸಂದರ್ಭದಲ್ಲಿ ಒಂದು ಕ್ರೇನ್ ಭಾರ ತಡೆಯಲಾದರೆ ರೋಪ್ ತುಂಡಾಗಿ ರಸ್ತೆ ಮಧ್ಯದಲ್ಲಿಯೇ ಮಗುಚಿ ಬಿದ್ದಿದೆ.
ಘಟನೆ ನಡೆದ ವೇಳೆ ಕಾರ್ಮಿಕರು ಸಮೀಪ ಇಲ್ಲದೇ ಇದ್ದುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ತಕ್ಷಣವೇ ಅಲ್ಲೇ ಇದ್ದ ಇನ್ನೊಂದು ಕ್ರೇನ್ ಮೂಲಕ ಬಿದ್ದಿದ್ದ ಕೇನ್ ಅನ್ನು ಮೇಲಕ್ಕೆ ಎತ್ತಲಾಗಿದ್ದು, ಬಳಿಕ ಕಾಮಗಾರಿ ಪ್ರಕ್ರಿಯೆ ಮುಂದುವರಿಯಿತು.
ಘಟನೆಯು ರಾತ್ರಿ ವೇಳೆ ನಡೆದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಹಗಲು ವೇಳೆ ಈ ರೀತಿಯ ಕಾಮಗಾರಿ ನಡೆಸುವಾಗ ಎಚ್ಚರ ವಹಿಸುವುದು ಅವಶ್ಯಕ. ವಾಹನ ಸವಾರರು, ಪಾದಚಾರಿಗಳು ಹೆಚ್ಚಾಗಿ ಈ ರಸ್ತೆಯಲ್ಲಿ ಸಂಚರಿಸುತ್ತಿರುತ್ತಾರೆ. ಬದಿಯಲ್ಲೇ ಪೆಟ್ರೋಲ್ ಬಂಕ್ ಕೂಡ ಇರುವುದರಿಂದ ಹೆಚ್ಚು ಎಚ್ಚರ ವಹಿಸುವ ಅವಶ್ಯಕತೆ ಇದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.