ಕಾರ್ಕಳ, ಜೂ 4 Daijiworld News/MSP): ಐತಿಹಾಸಿಕ ರಾಮಸಮುದ್ರ ಕೆರೆಯ ತುತ್ತ ತುದಿಯಲ್ಲಿ ಇರುವ ರುದ್ರಭೂಮಿಯ ಅಭಿವೃದ್ಧಿಗೆ ಕಾರ್ಕಳ ಪುರಸಭೆ ಮುಂದಾಗಿದೆ. ರೂ. 3.10 ಲಕ್ಷ ಅನುದಾನವನ್ನು ಅದಕ್ಕಾಗಿ ಕಾದಿರಿಸಿದೆ. ಹೆಚ್ಚುವರಿ ಖರ್ಚನ್ನು ಪುರಸಭಾ ಸಾಮಾನ್ಯ ನಿಧಿಯಿಂದ ಭರಿಸಲು ಚಿಂತನೆ ಕೈಗೊಳ್ಳಲಾಗಿದೆ.
ರಾಮಸಮುದ್ರಕ್ಕೆ ಲೀನವಾಗುತ್ತಿದೆ ರುದ್ರಭುಮಿಯ ಚಿತಾಭಸ್ಮ
ರಾಮುಸಮುದ್ರದ ತುತ್ತ ತುದಿಯಲ್ಲಿ ಇರುವ ರುದ್ರಭುಮಿಯ ಚಿತಾಭಸ್ಮ ರಾಮಸಮುದ್ರಕ್ಕೆ ಲೀನವಾಗುತ್ತಿದೆ. ಮಾತ್ರವಲ್ಲದೇ ಸ್ವಚ್ಛತೆಯಲ್ಲಿ ಬಲುದೂರ ಇರುವ ಇದೇ ರುದ್ರಭೂಮಿಯಲ್ಲಿ ಬೆಳೆದುನಿಂತಿರುವ ಕುರುಚಲು ಗಿಡಗಳು, ಪ್ಲಾಸ್ಟಿಕ್ ಕವರ್ಗಳು, ಬಟ್ಟೆ-ಬರೆಗಳು,ಶವದ ಅಂತಿಮ ಕಾರ್ಯಕ್ಕೆ ಬಳಸಲಾಗುವ ಮಡಕೆಗಳು, ಗ್ಲಾಸ್, ಮಡಲು, ಉಪ್ಪಿನ ಪ್ಯಾಕ್ಗಳು, ಹಸಿ ಹಾಗೂ ಕೊಳೆತು ಹೋದ ಹೂವಿನ ಹಾರಗಳು ಇತ್ಯಾದಿಗಳು ಅಲ್ಲೆಡೆಯಲ್ಲಿ ಬಿದ್ದುಕೊಂಡಿರುವುದು ಕಂಡುಬರುತ್ತಿದೆ.
ಈ ಕುರಿತು ಸಮಗ್ರ ರೀತಿಯಲ್ಲಿ ವರದಿ ಪ್ರಕಟಿಸಿದ ಬೆನ್ನಲ್ಲೆ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ನೇತೃತ್ವದಲ್ಲಿ ತನಿಖಾ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು.
ಸ್ವಚ್ಚತೆಗೆ ಒತ್ತು
ಸ್ವಚ್ಚತೆಯಲ್ಲಿ ಬಲುದೂರ ಇರುವ ರುದ್ರಭುಮಿಯ ಅಭಿವೃದ್ಧಿಗೆ ಮುಂದಾಗಿರುವ ಕಾರ್ಕಳ ಪುರಸಭೆಯು ಮೊದಲಿಗೆ ಸ್ವಚ್ಚತೆ ಕಾಪಾಡುವುದಕ್ಕೆ ಮುಂದಾಗಿದೆ.
ಮಂಗಳವಾರದಂದು ಪುರಸಭಾ ಪೌರಕಾರ್ಮಿಕರು ಗಿಡಗಂಟಿಗಳನ್ನು ತೆರವುಗೊಳಿಸಿದರು. ಬಿದ್ದುಕೊಂಡಿದ್ದ ತರಗೆಲೆಗಳನ್ನು ಗುಡಿಸಿ ರಾಶಿ ಹಾಕಿ ಅಲ್ಲಿಂದ ತೆರವುಗೊಳಿಸಿದರು. ಪರಿಸರದಲ್ಲಿ ಬಿದ್ದು ಕೊಂಡಿದ್ದ ತ್ಯಾಜ್ಯವನ್ನು ಸಂಗ್ರಹಿಸಲಾಯಿತು. ರುದ್ರಭೂಮಿಯ ಎದುರುಗಡೆ ತಂದು ಹಾಕಲಾಗಿದ್ದ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
ಉಪಯೋಗವಾದ ನಿರುಪಯೋಗ ತೊಟ್ಟಿಗಳು
ಈ ಹಿಂದೆ ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಕ್ಕಾಗಿ ರಸ್ತೆ ಬದಿಗಳಲ್ಲಿ ಉಪಯೋಗಿಸಲಾಗುತ್ತಿದ್ದ ನಿರುಪಯೋಗ ತೊಟ್ಟಿಗಳನ್ನು
ರುದ್ರಭುಮಿಯಲ್ಲಿ ಸದ್ಬಾಳಕ್ಕೆ ಚಿಂತನೆ ನಡೆಸಲಾಗಿದೆ. ರುದ್ರಭೂಮಿಯಲ್ಲಿ ಸಂಗ್ರಹವಾಗುವ ನಿರುಪಯೋಗ ಚಿತಾಭಸ್ಮವನ್ನು ಅಲ್ಲಿ ಸಿಮೆಂಟ್ ತೊಟ್ಟಿಗೆ ಹಾಕುವುದರಿಂದ ರಾಮಸಮುದ್ರದಲ್ಲಿ ಲೀನವಾಗುತ್ತಿದ್ದ ಚಿತಾಭಸ್ಮಕ್ಕೆ ಮುಕ್ತಿದೊರಕಲಿದೆ. ರುದ್ರಭುಮಿಯ ಹೂವಿನ ಮಾಲೆ, ಬಟ್ಟೆ,ಬರೆ, ಹಾಗೂ ಇತರ ಪರಿಗಳನ್ನು ಸಂಗ್ರಹಿಸುವುದಕ್ಕೆ ಇತರ ಸಿಮೆಂಟ್ ತೊಟ್ಟಿಗಳನ್ನು ಉಪಯೋಗಿಸುವುದಕ್ಕೆ ಚಿಂತನೆ ನಡೆಸಲಾಗಿದೆ.
ಸಮಿತಿಯಿಂದ ನಿರ್ವಹಣೆ
ರುದ್ರಭೂಮಿಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಮಿತಿಯೊಂದು ರೂಪುಗೊಳ್ಳಲಿದೆ. ಶವಸಂಸ್ಕಾರದ ತಯಾರಿ, ಕಟ್ಟಿಗೆ ಸವಲತ್ತು, ಸ್ವಚ್ಛತೆಯ ಕಾರ್ಯವು ಆ ಸಮಿತಿ ನಿರ್ವಹಿಸಲಿದೆ.