ಕುಂದಾಪುರ, ಜೂ04(Daijiworld News/SS): ಕರಾವಳಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ನೀರಿನ ತೀವ್ರ ಅಭಾವ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕುಂದಾಪುರ ವಲಯದಲ್ಲಿ ಹಲವೆಡೆ ಮಧ್ಯಾಹ್ನದವರೆಗೆ ಶಾಲೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಮಧ್ಯಾಹ್ನದ ನಂತರ ಹಲವು ಶಾಲೆಗಳಲ್ಲಿ ತರಗತಿ ನಡೆಸದೆ ಮಕ್ಕಳನ್ನು ಮನೆಗೆ ಬಿಡಲಾಗುತ್ತಿದೆ. ನೀರಿನ ಕೊರತೆ ತೀವ್ರವಾಗಿರುವುದರಿಂದ ಬಿಸಿಯೂಟ ತಯಾರಿ, ಕುಡಿಯಲು ನೀರಿಗೆ ಅಭಾವ ತೋರಿಬಂದಿದೆ. ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿನ ಬಾವಿಯ ನೀರು ಬರಿದಾಗಿರುವುದು, ಇರುವ ನೀರು ದೈನಂದಿನ ಅಗತ್ಯಕ್ಕೆ ಸಾಕಾಗದಿರುವ ಕಾರಣಕ್ಕೆ ಮಧ್ಯಾಹ್ನದ ನಂತರದ ತರಗತಿ ಮೊಟಕುಗೊಳಿಸಲಾಗಿದೆ ಎಂದು ಶಿಕ್ಷಕರು ಹೇಳಿದ್ದಾರೆ.
ಕುಂದಾಪುರದ ಓಕುಡ್, ಯುಬಿಎಂಸಿ, ಎಚ್ಎಂಎಂ ಸೈಂಟ್ ಮೇರಿಸ್ ಶಾಲೆಯಲ್ಲಿ ಮಧ್ಯಾಹ್ನದ ನಂತರ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ. ಕುಂದಾಪುರ ಹೋಲಿ ರೋಜರಿ ಪ್ರೌಢಶಾಲೆ, ಸೈಂಟ್ ಮೇರಿಸ್ ಪ್ರೌಢಶಾಲೆ, ವಿಕೆಆರ್ ಆಚಾರ್ಯ ಪ್ರೌಢಶಾಲೆಯಲ್ಲಿ 10ನೇ ತರಗತಿಗೆ ಮಾತ್ರ ಪಾಠ ಪ್ರವಚನ ನಡೆಸಲಾಗುತ್ತಿದೆ. ಉಳಿದ ಮಕ್ಕಳಿಗೆ ತರಗತಿ ಆರಂಭಿಸಲು ತೊಂದರೆ ಎದುರಾಗಿದೆ ಎಂದು ತಿಳಿದುಬಂದಿದೆ.
ನೀರಿನ ಅಭಾವದಿಂದಾಗಿ ಕುಂದಾಪುರ ವ್ಯಾಪ್ತಿಯ ಶಂಕರನಾರಾಯಣ ಮದರ ಥೆರೆಸಾ ಸ್ಕೂಲ್, ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ಇನ್ನೂ ಆರಂಭಿಸಿಲ್ಲ.