ಮಂಗಳೂರು, ನ.08(DaijiworldNews/AK):ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮೂಲ್ಕಿ ಪೊಲೀಸರು ಆರೋಪಿಯನ್ನು ಸರೆ ಹಿಡಿದು 2.56 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಮೂಲ್ಕಿ ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಮಲ್ಲಿಕಾರ್ಜುನ ಮಠದ ಬಳಿಯ ಡೋರ್ ನಂ.19-111ಎಯಲ್ಲಿ ವಾಸವಾಗಿರುವ ದುರ್ಗೇಶ್ ಅಲಿಯಾಸ್ ದುರ್ಗಪ್ಪ ಎಂಬುವರ ಪುತ್ರ ಅರುಣ್ (20) ಬಂಧಿತ ಆರೋಪಿ. ಇವರ ಖಾಯಂ ವಿಳಾಸ ಮಣ್ಣೂರ, ದೇವರ ಹಿಪ್ಪರಗಿ, ಸಿಂದಗಿ ತಾಲೂಕು, ಬಿಜಾಪುರ ಜಿಲ್ಲೆ.
ನವೆಂಬರ್ 6 ರಂದು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲೋನಿಯಲ್ಲಿ ಮಲ್ಲಮ್ಮ ಎಂಬುವವರ ಮನೆಯ ಹಿಂಬಾಗಿಲ ಬೀಗ ಮುರಿದು ಒಳನುಗ್ಗಿದ ಆರೋಪಿಗಳು 64.200 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದರು. ಘಟನೆ ಕುರಿತು ಮಲ್ಲಮ್ಮ ಅವರು ನ.7ರಂದು ಮೂಲ್ಕಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇನ್ಸ್ ಪೆಕ್ಟರ್ ವಿದ್ಯಾಧರ್ ಡಿ ಬೈಕಾರಿಕರ್ ಮತ್ತು ಅವರ ತಂಡ ನವೆಂಬರ್ 8 ರಂದು ಅರುಣ್ ನನ್ನು ಬಂಧಿಸಿ ಕದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ವಸ್ತುಗಳಾದ ಚಿನ್ನದ ಗುಂಡು ಚೈನ್: 29 ಗ್ರಾಂ, ಚಿನ್ನದ ನೆಕ್ಲೇಸ್: 11 ಗ್ರಾಂ, ಸಣ್ಣ ಕಪ್ಪು ಮಣಿ ಸರ: 11 ಗ್ರಾಂ, ಒಂದು ಜೊತೆ ಕಿವಿ ಜುಮುಕಿ : 3 ಗ್ರಾಂ, ಸಣ್ಣ ಕಿವಿಯೋಲೆಗಳ ಜೋಡಿ: 2 ಗ್ರಾಂ, ಸಣ್ಣ ಇಯರ್ ಹೂಪ್ಸ್ ಜೋಡಿ: 1.5 ಗ್ರಾಂ, ಸಣ್ಣ ಉಂಗುರ: 5 ಗ್ರಾಂ, ಪೆಂಡೆಂಟ್: 0.6 ಗ್ರಾಂ ಸರಪಳಿಗೆ ಚಿನ್ನದ ಮಣಿಗಳು (6 ತುಂಡುಗಳು): 0.5 ಗ್ರಾಂ, ಸಣ್ಣ ಕಿವಿಯ ಉಂಗುರಗಳ ಜೋಡಿ: 0.6 ಗ್ರಾಂ ವಶಪಡಿಸಿಕೊಂಡ ಚಿನ್ನದ ಒಟ್ಟು ತೂಕ 64.200 ಗ್ರಾಂ. ಅಂದಾಜಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಸಿದ್ಧಾರ್ಥ್ ಗೋಯಲ್ ಐಪಿಎಸ್ ಮತ್ತು ಡಿಸಿಪಿ ಅಪರಾಧ ಮತ್ತು ಸಂಚಾರ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಲಾಯಿತು. ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ನೇತೃತ್ವದಲ್ಲಿ ಪಿಎಸ್ಐ ಅನಿತಾ ಎಚ್ಬಿ, ಎಎಸ್ಐ ಹರಿಶೇಖರ್, ಹೆಡ್ ಕಾನ್ಸ್ಟೆಬಲ್ಗಳಾದ ಶಶಿಧರ್ ಮತ್ತು ಚಂದ್ರಶೇಖರ್, ಜಾಯ್ಸ್ ಸುಚಿತಾ ಡಿಸೋಜಾ, ಕಾನ್ಸ್ಟೆಬಲ್ ಸುನಿಲ್ ಮತ್ತು ಎಂಪಿಸಿ ಚಿತ್ರಾ ಅವರ ನೇತೃತ್ವದಲ್ಲಿ ನಡೆಯಿತು.