ಮಂಗಳೂರು, ಡಿ 1: ನಗರದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳ ಸಾಗಣೆಯ 6 ಪ್ರಕರಣಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದು 64 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಒಂದು ಪ್ರಕರಣದಲ್ಲಿ 803 ಗ್ರಾಂ ಚಿನ್ನದ ಪುಡಿಯನ್ನು ಅಂಟು ರೂಪಕ್ಕೆ ಪರಿವರ್ತಿಸುವ ಮೂಲಕ ಚಪ್ಪಲಿಯಲ್ಲಿ ಬಚ್ಚಿಟ್ಟಿದ್ದರೆ, ಇನ್ನೊಂದು ಪ್ರಕರಣದಲ್ಲಿ 466.4 ಗ್ರಾಂನ ಚಿನ್ನದ ಬಿಸ್ಕೀಟ್ ಗಳನ್ನು ಫುಟ್ ಬ್ಯಾಂಡ್ ಸುತ್ತಿದ್ದ ಕಾಲಿನಲ್ಲಿಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಮತ್ತೊಬ್ಬ ಪ್ರಯಾಣಿಕನನ್ನು ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಟ್ರೌಸರ್ ನ ಒಳ ಜೇಬಿನಲ್ಲಿ 184.29 ಗ್ರಾಂ ಚಿನ್ನದ ಬಿಸ್ಕೀಟ್ ದೊರೆತಿದೆ. ಇನ್ನೊಂದು ಪ್ರಕರಣದಲ್ಲಿ ಪ್ರಯಾಣಿಕನು 466.5 ಗ್ರಾಂನ 4 ಚಿನ್ನದ ಬಿಸ್ಕೀಟ್ ಗಳನ್ನು ಗುದದ್ವಾರದಲ್ಲಿ ಇಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ. ಉಳಿದ ಎರಡು ಪ್ರಕರಣಗಳಲ್ಲಿ ಇಬ್ಬರು ಪ್ರಯಾಣಿಕರಿಂದ, ರೇಡಿಯಂ ಲೇಪಿತ 221 ಗ್ರಾಂ ಚಿನ್ನದ ಕಡೆಗಳನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟಾರೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ ತಿಂಗಳಲ್ಲಿಯೇ ಒಟ್ಟು 64.38 ಲಕ್ಷ ಮೌಲ್ಯದ 2 ಕೆ ಜಿ ಚಿನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ದುಬೈನಿಂದ ಬಂದಿರುವ ಈ ಪ್ರಯಾಣಿಕರಲ್ಲಿ ಮೂವರು ಕಾಸರಗೋಡು, ಇಬ್ಬರು ಭಟ್ಕಳ ಮತ್ತು ಒಬ್ಬರನ್ನು ದಕ್ಷಿಣ ಕನ್ನಡ ಮೂಲದವರು ಎಂದು ಗುರುತಿಸಲಾಗಿದೆ.