ಮಂಗಳೂರು, ಜೂ03(Daijiworld News/SS): ಪಶ್ಚಿಮ ಕರಾವಳಿ ತೀರದಲ್ಲಿ ಬುಧವಾರ (ಜೂ05) ಈದುಲ್ ಫಿತ್ರ್ ಹಬ್ಬವನ್ನು ಮುಸ್ಲಿಂ ಬಾಂಧವರು ಆಚರಿಸಲು ಸಿದ್ಧತೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ, ಹಬ್ಬಾಚರಣೆಯ ಸಂದರ್ಭ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ನೆಲೆಯಲ್ಲಿ ಮಂಗಳೂರಿಗೆ ನೀರು ಬಿಡುವ ರೇಶನಿಂಗ್ ವ್ಯವಸ್ಥೆಯು ಜೂನ್ 5 ರಂದು ಜನರಿಗೆ ಮುಕ್ತಗೊಳಿಸಲು ಜಿಲ್ಲಾಡಳಿತಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೂಚಿಸಿದ್ದಾರೆ.
ಬುಧವಾರ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಗುವುದರಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರೇಶನಿಂಗ್ ವ್ಯವಸ್ಥೆಯ ನೀರು ಲಭ್ಯವಾಗಲಿದೆ. ಇದರಿಂದ ಸಾರ್ವಜನಿಕರ ಪರದಾಟ ತಪ್ಪಲಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಈದುಲ್ ಫಿತ್ರ್ ದಿನದಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕೇಂದ್ರ ಮತ್ತು ಕೆಲವು ಮಸೀದಿಗಳಲ್ಲಿ ನಡೆಯುವ ನಮಾಝ್ ಹಾಗೂ ಖುತ್ಬಾ ಪಾರಾಯಣ ನಡೆಯಲಿದೆ. ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಬೆಳಗ್ಗೆ 8ಕ್ಕೆ ದ.ಕ. ಜಿಲ್ಲಾ ಖಾಝಿ ಹಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನೆರವೇರಲಿದೆ.