ಗಂಗೊಳ್ಳಿ ,ಅ.30(DaijiworldNews/AK): ಗೋಹತ್ಯೆ ಹಾಗೂ ಅಕ್ರಮ ಗೋ ಸಾಗಾಟ ವಿಚಾರದಲ್ಲಿ ಸದಾ ಸುದ್ಧಿಯಲ್ಲಿರುವ ಗಂಗೊಳ್ಳಿ ಇಂದು ಮತ್ತೆ ಪುನ: ಇದೇ ವಿಚಾರಕ್ಕೆ ಸುದ್ಧಿಯಾಗಿದೆ. ಗಂಗೊಳ್ಳಿ ಗ್ರಾಮದ ಲೈಟ್ಹೌಸ್ ಕಡಲ ತೀರದಲ್ಲಿ ಬುಧವಾರ ಸಂಜೆ ಸುಮಾರು ಮೂರು ಜಾನುವಾರುಗಳ ಕಳೆಬರ ಪತ್ತೆಯಾಗಿದ್ದು, ಅಕ್ರಮ ಗೋಹತ್ಯೆ ಶಂಕೆ ವ್ಯಕ್ತವಾಗಿದೆ.
ಗೋಣಿ ಚೀಲದಲ್ಲಿ ತುಂಬಿದ ಸ್ಥಿತಿಯಲ್ಲಿ ಜಾನುವಾರು ಕಳೆಬರ ಪತ್ತೆಯಾಗಿದ್ದು, ಕಡಲ ತೀರದ ವಿವಿಧೆಡೆ ಜಾನುವಾರು ರುಂಡ ಪತ್ತೆಯಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಗಂಗೊಳ್ಳಿಯಲ್ಲಿ ಅಕ್ರಮ ಗೋಹತ್ಯೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಡಲ ತೀರದಲ್ಲಿ ಜಾನುವಾರು ಕಳೆಬರ ಪತ್ತೆಯಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು, ಹಿಂದುಗಳ ಧಾರ್ಮಿಕ ಹಬ್ಬಗಳ ಸಂದರ್ಭ ಇಂತಹ ಕೃತ್ಯಗಳನ್ನು ನಡೆಸಿ ಹಿಂದುಗಳ ಭಾವನೆಗಳನ್ನು ಕೆರಳಿಸುವ ಕೆಲಸ ನಡೆಯುತ್ತಿದೆ. ಅಕ್ರಮವಾಗಿ ಗೋವುಗಳನ್ನು ಹತ್ಯೆ ಮಾಡಿ ಅದರ ಕಳೆಬರಗಳನ್ನು ಕಡಲಿಗೆ ಎಸೆದು ವಿಕೃತಿ ಮೆರೆಯುತ್ತಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದರೂ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಕಳೆದ ನಾಲ್ಕೈದು ತಿಂಗಳಿನಲ್ಲಿ ಗಂಗೊಳ್ಳಿ ಗ್ರಾಮದ ಕಡಲ ತೀರದಲ್ಲಿ ಕಂಡು ಬಂದಿರುವ ಮೂರನೇ ಪ್ರಕರಣ ಇದಾಗಿದೆ. ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.