ಉಡುಪಿ,ಅ.30(DaijiworldNews/TA): ರಾಜ್ಯ ಕಾಂಗ್ರೆಸ್ ಸರ್ಕಾರವು ದಲಿತರಿಗೆ ನಿರಂತರ ಅನ್ಯಾಯ ಮಾಡುತ್ತಿದೆ. ದಲಿತ ವಿರೋಧಿ ಅಧಿಕಾರಿಗಳ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ದಲಿತ ಹೋರಾಟಗಾರ ಜಯನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಬ್ರಹ್ಮಗಿರಿ ನಾಯರ್ ಕೆರೆ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಅಂಬೇಡ್ಕರ್ ಯುವ ಸೇನೆ ಸಂಘಟನೆಯ ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತಿದ್ದರು. 'ಕಾಂಗ್ರೆಸ್ ಹಠಾವೋ ದಲಿತ್ ಬಚಾವೋ' ಹೆಸರಿನಡಿಯಲ್ಲಿ ಪ್ರತಿಭಟನೆ ನಡೆದಿದ್ದು, ಈ ವೇಳೆ ಪ್ರತಿಕ್ರಿಯೆ ನೀಡಿದ ಜಯನ್ ಮಲ್ಪೆ ಅವರು, ಉಡುಪಿಯಲ್ಲಿ ದಲಿತ ಸಮುದಾಯದ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ.
ದಲಿತರಿಗೆ ಕಾಂಗ್ರೆಸ್ ಸರ್ಕಾರ ನಿರಂತರ ಅನ್ಯಾಯ ಮಾಡಲಾಗುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಯಾವುದೇ ದಲಿತ ಕುಂದು ಕೊರತೆ ಸಭೆ ನಡೆಯುತ್ತಿಲ್ಲ. ಅದೂ ಅಲ್ಲದೆ ಡಿಸಿ ಮನ್ನಾ ಭೂಮಿ ಹಂಚಿಕೆ ಮಾಡಿಲ್ಲ, ದಲಿತರ ಅನುದಾನ ದುರ್ಬಳಕೆಯಾಗುತ್ತಿದೆ. ದಲಿತರ ನೂರಾರು ಸಮಸ್ಯೆಗೆ ಮನವಿ ಮಾಡಿದರೂ ಕಾಂಗ್ರೆಸ್ ಸ್ಪಂದಿಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.