ಉಡುಪಿ, ಅ.29(DaijiworldNews/AA): ಅಜೆಕಾರಿನ ದೇಪ್ಪುಟ್ಟೆಯ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಿಲೀಪ್ ಹೆಗ್ಡೆಯು ಜೂನ್ ತಿಂಗಳಿನಲ್ಲಿ ಉಡುಪಿ ಗ್ರಾಮಾಂತರದ ಖಾಸಗಿ ಲ್ಯಾಬ್ನಲ್ಲಿ ವಿಷ ಖರೀದಿಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಆರೋಪಿಯು ತಾನು ವೈದ್ಯಕೀಯ ವಿದ್ಯಾರ್ಥಿಯಂತೆ ನಟಿಸಿ ತನ್ನ ಲ್ಯಾಬ್ನ ಬಳಕೆಗೆ ಬೇಕೆಂದು ಲ್ಯಾಬ್ನವರನ್ನು ನಂಬಿಸಿ ಆತ "ಆರ್ಸೆನಿಕ್ ಟ್ರೈ ಆಕ್ಸೈಡ್" ಖರೀದಿಸಿದ್ದ. ಈ ಮೂಲಕ ಆರೋಪಿಗಳು ಬಾಲಕೃಷ್ಣ ಪೂಜಾರಿ ಹತ್ಯೆಗೆ ಐದು ತಿಂಗಳ ಹಿಂದೆಯೆ ಯೋಜನೆ ರೂಪಿಸಿದ್ದರು ಎಂಬುದು ತಿಳಿದುಬಂದಿದೆ.
ವಿಷ ಮಾರಾಟ ಮಾಡಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಲ್ಯಾಬ್ ಮಾಲೀಕರನ್ನು ವಿಚಾರಣೆಗೊಳಪಡಿಸಿದ್ದಾರೆ. ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಒಳಪಡಿಸುವುದಾಗಿ ಉಡುಪಿ ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಮುಂಬೈನಲ್ಲಿ ಬೆಳೆದು ಶಿಕ್ಷಣ ಪಡೆದಿದ್ದ ಆರೋಪಿ ದಿಲೀಪ್ ಹೆಗ್ಡೆ ಅವರು ಸಾಮಾಜಿಕವಾಗಿ ಸಕ್ರಿಯರಾಗಿರಲಿಲ್ಲ. ಬಿಕಾಂ ಪದವಿ ಪಡೆದಿರುವ ಆತ, ಕೆಲವು ವರ್ಷಗಳ ಹಿಂದೆ ಕಾರ್ಕಳದಲ್ಲಿ ಆತನ ಕುಟುಂಬ ಹೊಸ ಉದ್ದಿಮೆ ಆರಂಭಿಸಿದಾಗ ಊರಿಗೆ ಮರಳಿ ಬಂದು ಉದ್ಯಮದಲ್ಲಿ ತೊಡಗಿಕೊಂಡಿದ್ದ.
ಗೂಗಲ್ ಸರ್ಚ್ ಮುಲಕವೇ ಆರ್ಸೆನಿಕ್ ಟ್ರೈ ಆಕ್ಸೈಡ್ ಬಗ್ಗೆ ಆರೋಪಿ ಮಾಹಿತಿ ಪಡೆದಿದ್ದ. ಜೊತೆಗೆ ಸಾಮಾಜಿಕ ಜಾಲತಾಣ, ಸಿನೆಮಾ ಅಥವಾ ಗೆಳೆಯರ ಮೂಲಕ ಈ ವಿಷ ಪದಾರ್ಥದ ಕುರಿತು ಮಾಹಿತಿ ದೊರೆತಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.