ಕಾರ್ಕಳ, ಅ.28(DaijiworldNews/AK):ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆಯಲ್ಲಿ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಿಲೀಪ್ ಹೆಗ್ಡೆಯನ್ನು ಕಾರ್ಕಳ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಗಿದೆ. ನ್ಯಾಯಾಲಯವು ನ.೭ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯು ಪ್ರತಿಮಾಳ ಜತೆ ಸೇರಿಕೊಂಡು ಪ್ರತಿಮಾಳ ಗಂಡ ಬಾಲಕೃಷ್ಣ ಪೂಜಾರಿಯನ್ನು ಆತನ ಮನೆಯಲ್ಲಿ ಅ.೨೦ರ ತಡರಾತ್ರಿ ಕೊಲೆಗೈದಿದ್ದನು.ಆರೋಪಿ ಪ್ರತಿಮಾ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಮತ್ತೊಬ್ಬ ಆರೋಪಿ ದಿಲೀಪ್ ಹೆಗ್ಡೆ ಪೊಲೀಸ್ ಕಸ್ಟಡಿಯಲ್ಲಿ ಇದ್ದು, ಸೋಮವಾರ ಸಂಜೆ ಕಾರ್ಕಳ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದರು.ನ್ಯಾಯಾಲಯದ ನಿರ್ದೇಶನದಂತೆ ಆರೋಪಿ ದಿಲೀಪ್ ಹೆಗ್ಡೆ ಯನ್ನು ಉಡುಪಿಯ ಹಿರಿಯಡ್ಕ ಸಬ್ ಜೈಲ್ ಗೆ ಕರೆದೊಯ್ದಿದ್ದಾರೆ.
ಬಾಲಕೃಷ್ಣ ಪೂಜಾರಿಯ ನಿಗೂಢ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪ್ರತಿಮಾಳ ಸಹೋದರ ಪೊಲೀಸ್ ಠಾಣೆಗೆ ಮೊದಲಾಗಿ ಮಾಹಿತಿ ನೀಡಿ, ಸಹೋದರಿ ಪ್ರತಿಮಾಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.ಈ ಬಗ್ಗೆ ತನಿಖೆ ನಡೆದಿದ ಅಜೆಕಾರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಬಾಲಕೃಷ್ಣ ಪೂಜಾರಿಗೆ ವಿಷಪ್ರಾಶನ ನೀಡಿ ಆಸ್ಪತ್ರೆಗೆ ದಾಖಲಿಸುವಂತೆ ಪ್ರೇರಣ ಕರ್ತೆಯಾದವಳು ಪ್ರತಿಮಾ ಆಗಿದ್ದಳು.ಮಣಿಪಾಲ, ಮಂಗಳೂರು, ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕಗಳಲ್ಲಿ ಚಿಕಿತ್ಸೆ ಪಡೆದಿದ್ದ ಬಾಲಕೃಷ್ಣ ಪೂಜಾರಿ ಒಂದಿಷ್ಟು ಗುಣಮುಖರಾಗಿ ಮನೆಗೆ ಬಂದಿದ್ದರು.
ಬಾಲಕೃಷ್ಣ ಪೂಜಾರಿಯ ಚಿಕಿತ್ಸೆಯ ವೆಚ್ಚಗಳನ್ನು ಪ್ರತಿಮಾಳ ಸಹೋದರ ಸಂದೀಪ್ ಪೂಜಾರಿ ಭರಿಸಿ ಮನೆಗೆ ಕರೆದು ಕೊಂಡು ಬಂದಿದ್ದರು.ಈ ಎಲ್ಲಾ ಪ್ರಕರಣದ ಬಳಿಕ ನಡೆದಾಡುವ ಪರಿಸ್ಥಿತಿಯಲ್ಲಿ ಇಲ್ಲದಿದ್ದ ಬಾಲಕೃಷ್ಣ ಪೂಜಾರಿ ಅವರನ್ನು ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿಕೊಂಡಯ ಉಸಿರುಗಟ್ಟಿಸಿ ಅಮಾನುಷವಾಗಿ ಕೊಲೆಗೈದಿದ್ದರು.
ಗೆಳೆಯ ಹಾಗೂ ಭಾವನಾಗಿರುವ ಬಾಲಕೃಷ್ಣ ಪೂಜಾರಿ ಕೊಲೆ ಘಟನೆಯ ಬಳಿಕ ಸಹೋದರಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆಗೆ ಕಠಿಣ ಶಿಕ್ಷೆಯಾಗಬೇಕೆಂದು ಹೋರಾಟ ನಡೆಸಿ ಬಂದ ಸಂದೀಪ್ ಪೂಜಾರಿ ನ್ಯಾಯಾಲಕ್ಕೆ ಅಗಮಿಸಿ, ಆರೋಪಿಗಳಿಗೆ ಶಿಕ್ಷೆ ಯಾಗುವಂತೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುವಂತೆ ಭಿನ್ನವಿಸಿಕೊಂಡು ಕಣ್ಣೀರಿಟ್ಟ ಬೆಳವಣಿಗೆ ನ್ಯಾಯಾಲಯದ ಆವರಣದಲ್ಲಿ ನಡೆಯಿತು.