ಮಂಗಳೂರು, ಅ.28(DaijiworldNews/AA): "ತುಳುನಾಡಿನ ದೈವ ದೇವರುಗಳ ಅನುಗ್ರಹದಿಂದ ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಜೆಬಿಎಫ್ ಕಂಪೆನಿ ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟ ನಿರ್ವಸತಿಗರಿಗೆ ಉದ್ಯೋಗ ದೊರಕುವ ಕಠಿಣ ಸಮಸ್ಯೆಯು ಇತ್ಯರ್ಥವಾಗಿದೆ" ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಮಂಗಳೂರಿನ ವಿಶೇಷ ಆರ್ಥಿಕ ವಲಯ(ಎಂಎಸ್ಇಝೆಡ್)ದಲ್ಲಿ ಜೆಬಿಎಫ್ ಕಂಪೆನಿ ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟಿದ್ದವರ ಪೈಕಿಯಲ್ಲಿ 69 ಮಂದಿಗೆ ಜಿಎಂಪಿಎಲ್ (ಗೈಲ್ ಇಂಡಿಯಾ) ಕಂಪೆನಿಯಲ್ಲಿ ಉದ್ಯೋಗ ಕಲ್ಪಿಸುವ ನೇಮಕಾತಿ ಪತ್ರಗಳನ್ನು ಬಜಪೆಯ ಎಂಎಸ್ಇಝೆಡ್ನ ಜಿಎಂಪಿಎಲ್ ಕಂಪೆನಿಯಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಿ ಮಾತನಾಡಿದ ಕ್ಯಾ. ಚೌಟ ಅವರು, ಜೆಬಿಎಫ್ ಉದ್ಯೋಗಸ್ಥರ ಈ ಗಂಭೀರ ಸಮಸ್ಯೆ ಬಗೆಹರಿಸುವುದಕ್ಕೆ ತುರ್ತಾಗಿ ಸ್ಪಂದಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಈ ಸಂದರ್ಭದಲ್ಲಿ ನಾನು ಧನ್ಯವಾದ ಬಯಸುವುದಾಗಿ ತಿಳಿಸಿದ್ದಾರೆ.
"ಎಲ್ಲೇ ಹೋದರೂ ದಕ್ಷಿಣ ಕನ್ನಡದ ಉದ್ಯೋಗಿಗಳು ಅಂದರೆ ಬಹಳ ಶಿಸ್ತಿನ, ಉತ್ತಮ ಗುಣ ಸ್ವಭಾವದವರು, ವಿದ್ಯಾವಂತರು, ಕೌಶಲ್ಯವಂತರು ಹಾಗೂ ಹೆಚ್ಚು ಉತ್ಪಾದನಾ ಶೀಲತೆ ಪ್ರವೃತಿ ಬೆಳೆಸಿಕೊಂಡಿರುವವರು ಎನ್ನುವ ಹೊಗಳಿಕೆ ಮಾತು ಇದೆ. ಯಾವುದೇ ಒಂದು ಕಂಪೆನಿಯಲ್ಲಿ ಉದ್ಯೋಗಿಗಳ ನಡವಳಿಕೆ ಅಥವಾ ವರ್ತನೆ ಬಹಳ ಮುಖ್ಯ. ಹೀಗಾಗಿ ದೇಶದ ಬೇರೆ ಬೇರೆ ಕಡೆಯಿಂದ ಇಲ್ಲಿಗೆ ಬರುವ ಉದ್ಯೋಗಿಗಳಿಗೆ ನಮ್ಮ ನಡವಳಿಕೆಗಳು ಮಾದರಿಯಾಗಬೇಕು. ನೀವೆಲ್ಲರೂ ನಿಮ್ಮ ನಡೆ, ನುಡಿ, ನಡವಳಿಕೆ ಮೂಲಕ, ಕಂಪನಿಯಲ್ಲಿ ಉತ್ತಮ ವಾತಾವರಣ ನಿರ್ಮಿಸಿ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಬೇಕು. ಮುಂದೆ ಮಂಗಳೂರಿಗೆ ಇನ್ನಷ್ಟು ಸಂಸ್ಥೆಗಳು ಬರಬೇಕು; ಇಲ್ಲಿನ ಯುವ ಜನತೆಗೆ ಹೆಚ್ಚಿನ ಉದ್ಯೊಗಾವಕಾಶಗಳು ಸೃಷ್ಟಿಯಾಗಬೇಕೆಂಬ ಆಶಯ ನನ್ನದು" ಎಂದು ಹೇಳಿದರು.
ತುರ್ತು ಸ್ಪಂದಿಸಿ ಸಮಸ್ಯೆ ಬಗೆಹರಿಸಿದ್ದ ಸಂಸದ ಕ್ಯಾ. ಚೌಟ
ಗೈಲ್ ಇಂಡಿಯಾವು ಜೆಬಿಎಫ್ ಪೆಟ್ರೋಕೆಮಿಕಲ್ಸ್ನ ಪಿಟಿಎ ಸ್ಥಾವರವನ್ನು ಸ್ವಾಧೀನಪಡಿಸಿಕೊಂಡು, ಗೈಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಸ್ಥಾಪಿಸಿತ್ತು. ಆಗ ಜಿಎಂಪಿಎಲ್ ಕಂಪೆನಿಯು ಜೆಬಿಎಫ್ನ ಪ್ರಾಜೆಕ್ಟ್ ಡಿಸ್ಪ್ಲೇಸ್ಡ್ ಫ್ಯಾಮಿಲೀಸ್ (PDFs)ಗೆ ಗುತ್ತಿಗೆ ಆಧಾರಿತ ಉದ್ಯೋಗ ಮಾತ್ರ ನೀಡಲು ಪರಿಗಣಿಸಿತ್ತು. ಇದರಿಂದ ಜೆಬಿಎಫ್ನ ಉದ್ಯೋಗಸ್ಥರು ಅತಂತ್ರ ಸ್ಥಿತಿಯಲ್ಲಿದ್ದರು. ಹೀಗಿರುವಾಗ, ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾದ ತಕ್ಷಣವೇ ಕ್ಯಾ. ಚೌಟ ಅವರು ದಕ್ಷಿಣ ಕನ್ನಡದ ಪಿಡಿಎಫ್ ಕುಟುಂಬಸ್ಥರ ಬಹುದಿನಗಳಿಂದ ಈಡೇರದೆ ಬಾಕಿಯಾಗಿದ್ದ ಈ ಪ್ರಮುಖ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು.
ಖುದ್ದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ಈ ಗಂಭೀರ ಸಮಸ್ಯೆಯನ್ನು ಬಗೆಹರಿಸುವಂತೆ ಕ್ಯಾ. ಚೌಟ ಮನವಿ ಮಾಡಿದ್ದರು. ಸಂಸದರ ಸತತ ಪ್ರಯತ್ನದ ಪರಿಣಾಮ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಪೆಟ್ರೋಲಿಯಂ ಸಚಿವಾಲಯ ಹಾಗೂ ಜಿಎಂಪಿಎಲ್ ಕಂಪೆನಿ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಸೂಚಿಸುವ ಮೂಲಕ ಈ ಗಂಭೀರ ಸಮಸ್ಯೆ ಬಗೆಹರಿಸುವುದಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದರು. ಆ ಮೂಲಕ ಜೆಬಿಎಫ್ ಕಂಪೆನಿ ಸಂತ್ರಸ್ತರಿಗೆ ಜಿಎಂಪಿಎಲ್ ಕಂಪೆನಿಯಲ್ಲಿ ಉದ್ಯೋಗ ಪಡೆಯುವಲ್ಲಿ ಕ್ಯಾ. ಚೌಟ ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದೆ.