ಕಾಸರಗೋಡು, ಅ.28(DaijiworldNews/AA): ಉದ್ಯೋಗದ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣದ ಆರೋಪಿ ಶಿಕ್ಷಕಿ ಪೆರ್ಲ ಶೇಣಿ ಬಲ್ತ ಕಲ್ ನ ಸಚಿತಾ ರೈ (27)ಳನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ಸಚಿತಾ ರೈಯನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಗುರುವಾರ ಸಂಜೆ ನ್ಯಾಯಾಲಯಕ್ಕೆ ಶರಣಾಗಲು ತೆರಳುತ್ತಿದ್ದಾಗ ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದರು. ವಿದ್ಯಾನಗರ ಠಾಣಾ ಪೊಲೀಸರು ಮಾಹಿತಿ ಕಲೆ ಹಾಕಿ ಬಳಿಕ ಕುಂಬಳೆ ಪೊಲೀಸರಿಗೆ ಒಪ್ಪಿಸಿದ್ದರು. ಶುಕ್ರವಾರ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಲಾಗಿತ್ತು.
ಸಿಪಿಸಿಆರ್ಐ ನಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಕುಂಬಳೆ ಕಿದೂರಿನ ನಿಶ್ಮಿತಾ ಶೆಟ್ಟಿ ನೀಡಿದ ದೂರಿನಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಿಶ್ಮಿತಾ ಶೆಟ್ಟಿ ಮೊದಲ ದೂರನ್ನು ಕುಂಬಳೆ ಪೊಲೀಸರಿಗೆ ನೀಡಿದ್ದರು. ಇನ್ನು ಆರೋಪಿ ಸಚಿತಾ ರೈ ವಿರುದ್ಧ ಬದಿಯಡ್ಕ, ಮಂಜೇಶ್ವರ, ಮೇಲ್ಪರಂಬ, ಆದೂರು, ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲೂ ಇಂತಹ ವಂಚನೆಗೆ ಸಂಬಂಧಪಟ್ಟಂತೆ 11 ಪ್ರಕರಣಗಳು ದಾಖಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.