ಬಂಟ್ವಾಳ, ಜೂ03(Daijiworld News/SS): ಕರಾವಳಿಯ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ ಮತ್ತು ಅಸುಪಾಸಿನ ಗದ್ದೆಯಲ್ಲಿ ಕನ್ನಡ ಸಿನಿಮಾಗಾಗಿ ಭೂತ ಕೋಲ ಮಾದರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಆದರೆ ಧಾರ್ಮಿಕ ನಿಯಮ ಪಾಲಿಸದೆ ಸೆಟ್ ಹಾಕಿ ಚಿತ್ರೀಕರಿಸಿದ ಆರೋಪ ಇದೀಗ ಚಿತ್ರತಂಡದ ವಿರುದ್ಧ ಕೇಳಿಬಂದಿದೆ.
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಆನಂದ್' ಚಿತ್ರೀಕರಣ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಆಸುಪಾಸು ಭರದಿಂದ ಸಾಗುತ್ತಿದೆ. ದೇಗುಲದ ಮುಂಭಾಗದಲ್ಲಿ ಪೊಟ್ಟಂ ತೆಯ್ಯಂ ಕೋಲ ಮತ್ತು ಕೆಂಡ ಸೇವೆಯ ದೃಶ್ಯವು ಕೇರಳದ ಮನು ಮಣಿಕರ್ ಮತ್ತು ಬಳಗದ ಸಹಕಾರದಲ್ಲಿ ನಡೆದಿದ್ದು, ನಟಿ ರಚಿತಾ ರಾಮ್ ನೈಜ ದೈವ ಸೇವೆ ನೀಡುವ ದೃಶ್ಯ ಚಿತ್ರೀಕರಿಸಿದೆ. ಆದರೆ ತುಳುನಾಡಿನ ದೈವ ಕೋಲದ ರೀತಿ-ರಿವಾಜು ಗಾಳಿಗೆ ತೂರಿ ಚಿತ್ರೀಕರಣ ಮಾಡಿರುವ ಆರೋಪ ಚಿತ್ರತಂಡದ ಕೇಳಿಬರುತ್ತಿದೆ.
'ಆನಂದ್' ಚಿತ್ರತಂಡ ನಿಯಮಗಳನ್ನು ಗಾಳಿಗೆ ತೂರಿ ಚಿತ್ರೀಕರಣ ನಡೆಸಿದೆ. ಇದರಿಂದ ಕರಾವಳಿಯ ಜನರ ನಂಬಿಕೆಯಾದ ಭೂತರಾಧನೆಗೆ ಅಪಚಾರ ಮಾಡಿದಂತಾಗಿದೆ. ದೈವರಾಧನೆ ನಮ್ಮ ನಂಬಿಕೆ. ಈ ರೀತಿ ಚಿತ್ರೀಕರಣ ನಡೆಸುವುದು ಸರಿಯಲ್ಲ. ಇದೊಂದು ರೀತಿಯಲ್ಲಿ ಜನರ ನಂಬಿಕೆಗೆ ಮಾಡಿದ ಅವಮಾನ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿ.ವಾಸು ನಿರ್ದೇಶನ ಬಹುನಿರೀಕ್ಷಿತ ಚಿತ್ರ ಆನಂದ್. ಶಿವಲಿಂಗ ಚಿತ್ರದ ನಂತರ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಪಿ.ವಾಸು ಕಾಂಬಿನೇಷನ್ ಸಿನಿಮಾ ಇದು. ಈ ಸಿನಿಮಾದ ವಿಶೇಷತೆ ಅಂದರೆ, ಶಿವರಾಜ್ ಕುಮಾರ್ ನಟನೆಯ ಮೊದಲನೇ ಸಿನಿಮಾ 'ಆನಂದ್' ಶೀರ್ಷಿಕೆಯನ್ನೇ ಈ ಚಿತ್ರಕ್ಕೆ ಮರುಬಳಕೆ ಮಾಡುತ್ತಿದ್ದಾರೆ. ಆನಂದ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು ಶಿವರಾಜ್ಕುಮಾರ್. 1986ರಲ್ಲಿ ತೆರೆ ಕಂಡ ಈ ಸಿನಿಮಾ ಸೂಪರ್ ಹಿಟ್ ಕೂಡ ಆಗಿತ್ತು. ಹಾಗಾಗಿ ಅದೇ ಸಿನಿಮಾದ ಶೀರ್ಷಿಕೆಯನ್ನು ಬಳಸಲು ತೀರ್ಮಾನ ಮಾಡಿದ್ದಾರಂತೆ ನಿರ್ದೇಶಕರು.