ಮಂಗಳೂರು, ನ 30: ಜಿಲ್ಲೆಯಲ್ಲಿ ಶಾಂತಿ ,ಸೌಹಾರ್ದತೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಡಿಸೆಂಬರ್ 12 ರಂದು ಫರಂಗಿಪೇಟೆಯಿಂದ ಮಾಣಿಯವರೆಗೆ 'ಸಾಮರಸ್ಯದ ನಡಿಗೆ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ನಗರದ ಮಿನಿ ಟೌನ್ ಹಾಲ್ ಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಸಾಮರಸ್ಯ ಉದ್ದೇಶದ ಈ ರ್ಯಾಲಿ ಫರಂಗಿಪೇಟೆಯಿಂದ ಆರಂಭಿಸಿ ಮಾಣಿಯಲ್ಲಿ ಕೊನೆಗೊಳ್ಳಲಿದೆ ಬಳಿಕ ಅಲ್ಲಿ ಸಾರ್ವಜನಿಕ ಬಹಿರಂಗ ಸಭೆ ನಡೆಯಲಿದೆ ಎಂದು ತಿಳಿಸಿದರು. ಜಿಲ್ಲೆಯೂ ಶಾಂತಿ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ , ಆದರೆ ಕೆಲವು ಕೋಮುವಾದಿಗಳು ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಸಾಮರಸ್ಯಜಿಲ್ಲೆ ಎಂಬ ಖ್ಯಾತಿಗೆ ದಕ್ಕೆ ತರುವ ಕೆಲಸ ನಡಿತಾ ಇದೆ ಎಂದರು . ಈ ಸಭೆಯಲ್ಲಿ ರಾಜ್ಯದ ಕೆಲವು ಪ್ರಮುಖ ನಾಯಕರನ್ನು ಆಹ್ವಾನಿಸಲಾಗಿದ್ದು , ಕೋಮುವಾದಿ ಸಂಘಟನೆಗಳನ್ನು ಸಾಮರಸ್ಯದ ನಡಿಗೆಯಿಂದ ಹೊರಗಿಡಲಾಗಿದೆ ಎಂದರು. ಇದೇ ವೇಳೆ ಸಾಮರಸ್ಯದ ನಡಿಗೆ ಕಾರ್ಯಕ್ರಮದ ಪೋಸ್ಟರ್ ಮತ್ತು ಲಾಂಛನ ಬಿಡುಗಡೆಗೊಳಿಸಿದರು.
ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ್ ಆಚಾರ್ಯ, ದಲಿತ ನಾಯಕ ದೇವದಾಸ್, ಡಿವೈಎಫ್ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಾಮಾಜಿಕ ಕಾರ್ಯಕರ್ತ ರೀಟಾ ನೊರೊನ್ಹಾ ಮತ್ತಿತರರು ಉಪಸ್ಥಿತರಿದ್ದರು.