ಉಡುಪಿ, ಅ.26(DaijiworldNews/AA): ಎಂಟು ವರ್ಷಗಳ ಕಾಲ ನಿಷ್ಠಾವಂತ ಸೇವೆ ಸಲ್ಲಿಸಿದ ಪೊಲೀಸ್ ಶ್ವಾನ 'ಕ್ಯಾಪ್ಟನ್' ತನ್ನ ಸೇವೆಯಿಂದ ಅ.25ರಂದು ನಿವೃತ್ತಿ ಹೊಂದಿದೆ.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಕ್ಯಾಪ್ಟನ್ಗೆ ಪೊಲೀಸ್ ಅಧೀಕ್ಷಕರು ನಿವೃತ್ತಿ ಸನ್ಮಾನ ಮಾಡಿದರು. ಕವಾಯತು ನೀಡುವುದರ ಮೂಲಕ ಕ್ಯಾಪ್ಟನ್ ಗೆ ಗೌರವ ಸಲ್ಲಿಸಲಾಯಿತು.
ಮಾನ್ಯ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು, ಐಪಿಎಲ್ ಟೂರ್ನಿ, ವಿಶ್ವಕಪ್, ಏರ್ ಶೋ, ಬೇರೆ ದೇಶಗಳ ಗೌರವಾನ್ವಿತ ಪ್ರಧಾನಿಗಳು ಹೀಗೆ ರಾಜ್ಯ ಹೊರರಾಜ್ಯ ಹೊರ ಜಿಲ್ಲೆಗಳಲ್ಲಿ ಸರಿ ಸುಮಾರು 400 ಕ್ಕೂ ಅಧಿಕ ವಿದ್ವಂಸಕ ಕೃತ್ಯ ತಪಾಸಣಾ ಕಾರ್ಯಚರಣೆಯಲ್ಲಿ ಕ್ಯಾಪ್ಟನ್ ಪ್ರಮುಖ ಪಾತ್ರ ವಹಿಸಿದೆ. ಅಷ್ಟೇ ಅಲ್ಲದೇ ಹೆಸರಿಗೆ ತಕ್ಕಹಾಗೆ ಕ್ಯಾಪ್ಟನ್ ಎಂಬ ಗರಿಮೆಯನ್ನು ಪಡೆದುಕೊಂಡಿದೆ.
ವಲಯ ಮಟ್ಟದ ಕರ್ತವ್ಯಕೂಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದೆ. ಈ ಕವಾಯತಿನಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ ಟಿ ಸಿದ್ಧಲಿಂಗಪ್ಪ, ಕೆಎಸ್ ಪಿಎಸ್, ಡಿಎಆರ್ ಅಧಿಕ್ಷಕರಾದ ತಿಮ್ಮಪ್ಪ ಗೌಡ ಕೆಎಸ್ ಪಿಎಸ್, ಹಾಗೂ ಎಲ್ಲಾ ಠಾಣೆಗಳ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.