ವರದಿ: ಆರ್.ಬಿ.ಜಗದೀಶ್
ಕಾರ್ಕಳ, ಜೂ 03 (Daijiworld News/MSP): ಕಡುಬೇಸಿಗೆಯಲ್ಲಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಸೆ ಬಗ್ಗೆ ಹರಿಸುವ ನಿಟ್ಟಿನಲ್ಲಿ ಕಾರ್ಕಳ ಪುರಸಭೆಯು ರಾಮಸಮುದ್ರ ಹಾಗೂ ಮುಂಡ್ಲಿಯಲ್ಲಿ ಬೃಹತ್ ಗಾತ್ರದ ಬಾವಿಗಳನ್ನು ನಿರ್ಮಿಸುವ ಮಹತ್ವದ ಯೋಜನೆಯನ್ನು ಹಾಕಿಕೊಂಡಿದೆ.
ರಾಮಸಮುದ್ರ ಪರಿಸರದಲ್ಲಿ ನೀರಿಗಾಗಿ ಹೊಂಡ ತೆಗೆಯುತ್ತಿರುವ ಇಟೇಚ್ ಯಂತ್ರೋಪಕರಣ
ಮುಂಡ್ಲಿಯಲ್ಲಿ ಬೃಹತ್ ಗಾತ್ರದ ಬಾವಿ
1994ರಲ್ಲಿ ದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡ್ಲಿ ಎಂಬಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ಕಿಂಡಿಅಣೆಕಟ್ಟು ನಿರ್ಮಿಸಿದ್ದು, ಕಡುಬೇಸಿಗೆ ಎದುರಾದ ಹಿನ್ನಲೆಯಲ್ಲಿ ಸ್ವರ್ಣ ನದಿ ಸಂಪೂರ್ಣ ಬತ್ತಿ ಹೋಗಿದ್ದು, ನೀರು ಸರಬರಾಜು ಕೇಂದ್ರಕ್ಕೆ ಬೀಗ ಜಡಿದು ತಿಂಗಳು ಕಳೆದು ಹೋಗಿದೆ. ಮುಂಡ್ಲಿ ನೀರು ಸರಬರಾಜು ಕೇಂದ್ರದ ಪರಿಸರದಲ್ಲಿ ಬೃಹತ್ ಗಾತ್ರದ ಬಾವಿಯನ್ನು ನಿರ್ಮಿಸಿದ್ದಲ್ಲಿ ಅಲ್ಲಿಂದ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಸದುದ್ದೇಶದಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಚಿಂತನೆ ನಡೆಸಿದೆ.
ರಾಮಸಮುದ್ರದಲ್ಲೂ ಬಾವಿ ನಿರ್ಮಾಣದ ಗುರಿ
ಕಾರ್ಕಳ ಪುರಸಭೆಯು ತುರ್ತು ಸಂದರ್ಭಗಳಲ್ಲಿ ಐತಿಹಾಸಿಕ ರಾಮಸಮುದ್ರದ ನೀರನ್ನೇ ಪುರಸಭಾ ವ್ಯಾಪ್ತಿಗೆ ಸರಬರಾಜು ಮಾಡುತ್ತಾ ಬಂದಿದೆ. ಪ್ರಸಕ್ತ ವರ್ಷದ ಕಡುಬೇಸಿಗೆಯ ಕಾಲಘಟ್ಟದಲ್ಲಿ ಮುಂಡ್ಲಿಯಲ್ಲಿ ಹರಿಯುತ್ತಿದ್ದ ಸ್ವರ್ಣ ನದಿ ಸಂಪೂರ್ಣ ಬತ್ತಿ ಹೋದ ಬಳಿಕ ರಾಮಸಮುದ್ರದ ನೀರನ್ನೇ ಪುರಸಭಾ ವ್ಯಾಪ್ತಿಗೆ ೨ದಿನಗಳಿಗೊಮ್ಮೆ ನೀಡಲು ಸಾಧ್ಯವಾಗಿತ್ತು. ಜೂನ್ ಮೊದಲವಾರ ಆರಂಭಗೊಂಡಿದ್ದರೂ ಮುಂಗಾರ ಮಳೆಯ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಮತ್ತೊಂದೆಡಯಲ್ಲಿ ಕಡುಬೇಸಿಗೆಯಿಂದಾಗಿ ರಾಮಸಮುದ್ರದ ನೀರು ತಳ ಸೇರಿಕೊಂಡಿದೆ. ಇದರಿಂದಾಗಿ ಪುರಸಭೆಗೆ ಕಗ್ಗಂಟಿಗೆ ಸಿಲುಕಿದೆ. ಎರಡುದಿನಗಳಿಗೊಮ್ಮೆ ನೀಡಲಾಗುತ್ತಿದ್ದ ನೀರನ್ನು ಸರಬರಾಜು ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಇದೇ ಕಾರಣಕ್ಕಾಗಿ ರಾಮಸಮುದ್ರದ ಪರಿಸರದಲ್ಲಿ ಬೃಹತ್ ಗಾತ್ರದ ಬಾವಿ ನಿರ್ಮಿಸುವುದರಿಂದ ಕುಡಿಯುವ ನೀರು ಸರಬರಾಜು ಮಾಡಲು ಪುರಸಭೆಗೆ ಸಾಧ್ಯವಾಗಲಿದೆ ಎಂಬ ಲೆಕ್ಕಚಾರವನ್ನು ಮುಂದಿಟ್ಟು ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.
ಪ್ರಸ್ತುತ ಪರ್ಯಾಯ ವ್ಯವಸ್ಥೆ
ದಿನೇದಿನೆ ರಾಮಸಮುದ್ರದ ನೀರು ಕಡಿಮೆಯಾಗುತ್ತಿದೆ. ಕಳೆದ ವಾರ ಎರಡು ಲೆಂತ್ ಉದ್ದದ ಪೈಪನ್ನು ಜೋಡಣೆ ಮಾಡಲಾಗಿದೆ. ಆದರೂ ಜಾಕ್ವೆಲ್ಗೆ ನೀರು ಸಾಕಾಗುದಿಲ್ಲ. ಈ ನಿಟ್ಟಿನಲ್ಲಿ ಇಟೇಚ್ ಮೂಲಕ ಅದೇ ಪರಿಸರದಲ್ಲಿ ೬ ಅಡಿ ಅಳ ಕೊರೆಯುವ ಪ್ರಯತ್ನ ನಡೆಸಲಾಗುತ್ತಿದೆ. - ರೇಖಾ ಜೆ.ಶೆಟ್ಟಿ ಪುರಸಭಾ ಮುಖ್ಯಾಧಿಕಾರಿ ಕಾರ್ಕಳ