ಮಂಗಳೂರು, ಅ.25(DaijiworldNews/AA): ಸೈಬರ್ ಕಿರುಕುಳ, ಬೆದರಿಕೆ ಮತ್ತು ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅ.22ರಂದು ಮಂಗಳೂರು ಮಧ್ಯ ಗ್ರಾಮದ ಯುವತಿಯೋರ್ವಳ ಫೇಸ್ಬುಕ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದು, ಅಶ್ಲೀಲ ಮತ್ತು ಬೆದರಿಕೆ ಸಂದೇಶಗಳನ್ನು ಯುವತಿಯ ಅಣ್ಣನಿಗೆ ಮತ್ತು ಅವರ ಸ್ನೇಹಿತರಿಗೆ ಕಳುಹಿಸಲಾಗಿದೆ ಎಂಬ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೊತೆಗೆ ಈ ಸಂದೇಶಗಳನ್ನು ಇಡ್ಯಾ ಗ್ರಾಮದ ಶಾರೀಕ್ ಎಂಬಾತ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ದೂರಿನ ಅನುಸಾರ, ಸುರತ್ಕಲ್ ಠಾಣಾ ಪೊಲೀಸರು ಅ.22 ರಂದು ಭಾರತೀಯ ದಂಡ ಸಂಹಿತೆಯ 78, 352, 351 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66C, 66D ಮತ್ತು 67A & B ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಶಾರೀಕನನ್ನು ವಿಚಾರಣೆಗಾಗಿ ಠಾಣೆಗೆ ಕರೆಯಲಾಗಿದ್ದು, ಅವರ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳನ್ನು ಪರಿಶೀಲಿಸಲಾಯಿತು. ಆದರೆ, ಪ್ರಾಥಮಿಕ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಲಭಿಸದ ಕಾರಣ, ಸಂಬಂಧಿತ ಸಾಮಾಜಿಕ ಮಾಧ್ಯಮ ಸೇವಾಪೂರಕರಿಂದ ಹೆಚ್ಚಿನ ಮಾಹಿತಿಯನ್ನು ಕೇಳಲಾಗಿತ್ತು.
ಅ.24 ರಂದು, ಯುವತಿಗೆ ಮತ್ತೊಂದು ಬೆದರಿಕೆ ಸಂದೇಶ ಬಂದಿದ್ದು, ಇದರಿಂದಾಗಿ ಅವಳು ಮಾನಸಿಕ ತೊಂದರೆಗೊಳಗಾಗಿದ್ದರು. ತೀವ್ರ ನೊಂದ ಮನಸ್ಥಿತಿಯಲ್ಲಿ, ಶಾರೀಕ್ ಮತ್ತು ಅವರ ತಾಯಿ ನೂರ್ ಜಹಾನ್ ರವರ ಕಿರುಕುಳದಿಂದ ಆತ್ಮಹತ್ಯೆಗೆ ತೀರ್ಮಾನಿಸಿರುವುದಾಗಿ ಪತ್ರ ಬರೆದು, ಇಂದು ಮುಂಜಾನೆ 10 ಮಾತ್ರೆಗಳು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯ ಬಳಿಕ, ಯುವತಿ ಮಾಹಿತಿ ನೀಡಿದ ಪ್ರಕಾರ, ಶಾರೀಕ್ ಅವರ ನಿರಂತರ ಕಿರುಕುಳದಿಂದ ತಾನು ಭೀತಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದರ ಆಧಾರದಲ್ಲಿ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 125/24 ಅನ್ನು ಭಾರತೀಯ ದಂಡ ಸಂಹಿತೆಯ 78(1)(I), 351(1 & 2) ಮತ್ತು 3(5) ಸೆಕ್ಷನ್ ಅಡಿಯಲ್ಲಿ ದೋಷಾರೋಪಣೆ ಮಾಡಲಾಗಿದೆ. ಶಾರೀಕನನ್ನು ಈಗಾಗಲೇ ಬಂಧಿಸಲಾಗಿದ್ದು ಮತ್ತು ತನಿಖೆ ಮುಂದುವರಿದಿದೆ.