ಮಂಗಳೂರು, ಅ.25(DaijiworldNews/AA): ಮಂಗಳೂರಿನ ಚಾಲಕನಿಗೆ ಅಸಭ್ಯವಾಗಿ ಗುಂಡ್ಯ, ಮಾರ್ನಳ್ಳಿ ಪೋಲಿಸ್ ಚೆಕ್ ಪಾಯಿಂಟ್ನಲ್ಲಿ ಸಕಲೇಶಪುರ ಸಬ್ ಇನ್ಸ್ಪೆಕ್ಟರ್ ಸದಾಶಿವ ತಿಪ್ಪಾರೆಡ್ಡಿ ನಿಂದನೆ ಮಾಡಿದ ಘಟನೆ ಅಕ್ಟೋಬರ್ 23ರಂದು ನಡೆದಿದೆ.
ಎಸ್ಐ ಸದಾಶಿವ ತಿಪ್ಪಾರೆಡ್ಡಿ ಅವರು, ವಾಹನಗಳನ್ನ ತಡೆದು ದಾಖಲೆಗಳು ಇಲ್ಲದ ವಾಹನಗಳಿಗೆ, ಕಾನೂನು ಪಾಲಿಸದೆ ಸಮವಸ್ತ್ರ ಧರಿಸದೆ ಇದ್ದ ಚಾಲಕರ ಮೇಲೆ, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾವಣೆ ಮಾಡುವರ ಮೇಲೆ, ದಂಡ ವಿಧಿಸುವ ಕರ್ತವ್ಯದಲ್ಲಿ ನಿರತರಾಗಿದ್ದರು. ಈ ಸಮಯದಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಮಂಗಳೂರಿನ ಅಬ್ದುಲ್ ಬಾರಿ ಎಂಬ ಹೆಸರಿನ ಚಾಲಕ, ಸಮವಸ್ತ್ರ ಧರಿಸಿಕೊಂಡು ಬರುತ್ತಾನೆ, ಆದರೆ ಸೀಟ್ ಬೆಲ್ಟ್ ಹಾಕಿಲ್ಲ 500 ರೂಪಾಯಿ ದಂಡ ಕಟ್ಟು ಎಂದು ಎಸ್ಐ ಹೇಳಿದ್ದೂ, ಈ ವೇಳೆ ಚಾಲಕ ನನ್ನ ಕೈಯಲ್ಲಿ ದುಡ್ಡು ಕಟ್ಟಲು ದುಡ್ಡು ಇಲ್ಲ, ನಾನು ಒಂದು ಕಂಪನಿ ವಾಹನದ ಚಾಲಕ, ನೀವು ದಂಡ ಹಾಕಿ ರಶೀದಿ ನೀಡಿ ನನ್ನ ಮಾಲಕರು ಅಲ್ಲೇ ದಂಡ ಕಟ್ಟುತ್ತಾರೆ ಎಂದು ತಿಳಿಸಿದ್ದಾರೆ.
ಚಾಲಕ ಇವಾಗ ದಂಡ ಕಟ್ಟಲು ದುಡ್ಡು ಇಲ್ಲ ಎಂದಾಗ ಏಕಾಏಕಿ ಸಬ್ ಇನ್ಸ್ಪೆಕ್ಟರ್ ಸದಾಶಿವ ಅವರು ನೀನು ಯಾವ ಊರಿನವ ಮಂಗಳೂರಿನವರ ಹಾಗೆ ಇಲ್ಲಿ ಮಾತನಾಡಲಾಗುವುದಿಲ್ಲ, ಎಂದು ಹೇಳುತ್ತಾ ಅಸಭ್ಯ ಪದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ. ನಂತರದಲ್ಲಿ ಸಮವಸ್ತ್ರ ಧರಿಸದೆ ಇದ್ದ ಪೊಲೀಸ್ ಪೇದೆ ಒಬ್ಬ ಈ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬೈದು, ಅಲ್ಲಿ ಠಾಣೆಯ ರೂಮಿನೊಳಗೆ ಕಾಲರ್ ಪಟ್ಟಿ ಹಿಡಿದು ಎಳೆದುಕೊಂಡು ಹೋಗಿ ಹೊಡೆದಿರುತ್ತಾರೆ. ಕಣ್ಣೀರು ಹಾಕಿಕೊಂಡು ಹೊರಬಂದ ಚಾಲಕ ಪುನಃ ಅದೇ ಮಾತನ್ನು ಹೇಳುತ್ತಾನೆ. ನಾನು ದುಡ್ಡು ಕೊಟ್ಟರೆ ಕಂಪನಿಯಿಂದ ನನಗೆ ದೊರೆಯುವುದಿಲ್ಲ. ನನಗೆ ನಷ್ಟ ಆಗುತ್ತದೆ. ನಮ್ಮ ಸಂಸ್ಥೆಯ ನಿಯಮ ಯಾರೇ ಅಧಿಕಾರಿಗಳು ದಂಡ ವಿಧಿಸಿದರೂ ಅದರ ರಸೀದಿಯನ್ನು ನೀಡಿದರೆ ಸಂಸ್ಥೆಯೇ ಹಣ ಕಟ್ಟುತ್ತಾರೆ ಎಂದು ವಿನಂತಿ ಮಾಡಿದರೂ ಪೊಲೀಸರು ಯಾವುದೇ ಮಾನವೀಯತೆಯನ್ನು ತೋರಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಚಾಲಕ ಖಾಕಿ ಬಟ್ಟೆ ಧರಿಸಿ ಅವನು ತನ್ನ ಹೊಟ್ಟೆಪಾಡಿಗೆ ಕಷ್ಟಪಟ್ಟು ರಾತ್ರಿ ಹಗಲು ದುಡಿಯುತ್ತಾನೆ. ಯಾವುದೇ ಕಳ್ಳತನ ವಂಚನೆ ದರೋಡೆ ಸುಲಿಗೆ ಇತರ ಕೃತ್ಯಗಳನ್ನು ಮಾಡುವುದಲ್ಲ, ತುಂಬಾ ಶ್ರಮಪಟ್ಟು ವಾಹನ ಚಾಲನೆ ಮಾಡುತ್ತಾರೆ. ಇಂತಹ ಒಬ್ಬ ಬಡಪಾಯಿ ಚಾಲಕನ ಮೇಲೆ ಅದೇ ಖಾಕಿ ಧರಿಸಿದ ಸರಕಾರಿ ಪೊಲೀಸ್ ಅಧಿಕಾರಿ ಹಲ್ಲೆ ಮಾಡುವುದು ಕೆಟ್ಟ ಶಬ್ದಗಳಿಂದ ತೇಜೋವಧೆ ಮಾಡುವುದು ಸರಿನಾ? ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ.