ಉಡುಪಿ, ಜೂ 03 (Daijiworld News/MSP): ’ಸಿಎಂ ಕುಮಾರಸ್ವಾಮಿ ಅವರೇ ಯಾಕೆ ವಿಧಾನಸೌಧದಲ್ಲಿ "ವಾಸ್ತುವೇ " ಇಲ್ಲ ಅನಿಸಿಬಿಟ್ಟಿದೆಯೇ? ’ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ’ ಗ್ರಾಮ ವಾಸ್ತವ್ಯ ’ ವಿಚಾರವಾಗಿ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಂಸದೆ ಶೋಭಾ, ಕುಮಾರಸ್ವಾಮಿಗಳು ಈ ಹಿಂದೆ ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ ಏನಾಗಿದೆ? ಗ್ರಾಮ ವಾಸ್ತವ್ಯ ದಿಂದ ಗ್ರಾಮಗಳ ಅಭಿವೃದ್ದಿ ಆಗಲ್ಲ ಎಂದು ತಿಳಿದಿರಲಿ.ಜನ ನಿಮಗೆ ಅಧಿಕಾರ ಕೊಟ್ಟಿರೋದು ಕೇವಲ ಗ್ರಾಮ ವಾಸ್ತವ್ಯ ಮಾಡೋಕಲ್ಲ. ವಿಧಾನಸೌಧದಲ್ಲಿ ಕೂತ್ಕೊಂಡು ಕೆಲಸ ಮಾಡೋಕೆ ಅಧಿಕಾರ ಕೊಟ್ಟಿದ್ದಾರೆ ಎನ್ನುವುದು ನೆನಪಿರಲಿ. ಆದರೆ ಮುಖ್ಯಮಂತ್ರಿಗಳಾಗಿ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಒಂದು ದಿನವೂ ಉಪಸ್ಥಿತರಿರುವುದಿಲ್ಲ ಎಂದು ಕಿಡಿಕಾರಿದರು.
ರೆಸಾರ್ಟ್ , ದೇವಸ್ಥಾನ ಸುತ್ತುವ ಮುಖ್ಯಮಂತ್ರಿಗಳು ಹೊಟೇಲ್ ವೆಸ್ಟ್ ಎಂಡ್ ನಿಂದಲೇ ಆಡಳಿತ ನಡೆಸ್ತಾರೆ.ನಮ್ಮ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನಸೌಧ ಬಿಟ್ಟು ಹೊಟೇಲ್ ರೂಂ ನಿಂದ ಆಡಳಿತ ಮಾಡುವ ಸಿಎಂ ಆಗಿದ್ದಾರೆ. ಕುಮಾರಸ್ವಾಮಿಗಳಿಗೆ ವಿಧಾನಸೌಧದಲ್ಲಿ ವಾಸ್ತುವೇ ಇಲ್ಲ ಎಂದು ಅನಿಸಿಬಿಟ್ಟಿರಬೇಕು. ಇಲ್ಲವಾದರೆ ಯಾಕಾಗಿ ವೆಸ್ಟ್ ಎಂಡಲ್ಲಿ ಕುಳಿತ್ತಿದ್ದೀರಿ. ವಿಧಾನ ಸೌಧ ಮೂರನೆ ಮಾಳಿಗೆ ಇರೋದೇ ಸಿಎಂ ಗೆ ಕೂತ್ಕೊಳೋಕೆ ಎಂದು ಮರೆತು ಹೋಗಿರಬೇಕು. ಸಿಎಂ ಈ ರೀತಿಯಾಗಿ ವರ್ತಿಸುವುದರಿಂದ ಆಡಳಿತ ವ್ಯವಹಾರಕ್ಕೆ ಬರುವವರಿಗೆ ಅನುಕೂಲವಾಗುತ್ತದೆ, ಆದರೆ ಜನ ಸಾಮಾನ್ಯರಿಗೆ ಭೇಟಿ ಮಾಡಲು ತುಂಬಾ ಕಷ್ಟ ಪಡಬೇಕಾಗುತ್ತದೆ ಎಂದು ಸಿಎಂ ವಿರುದ್ದ ಶೋಭಾ ಅಸಮಧಾನ ವ್ಯಕ್ತಪಡಿಸಿದರು.