ಸುರತ್ಕಲ್, ಜೂ 03 (Daijiworld News/MSP): ಸುರತ್ಕಲ್ ಗುಡ್ಲೆಕೊಪ್ಪ ಬೀಚ್ ನಲ್ಲಿ ಡಾಲ್ಫಿನ್, ಕಡಲಾಮೆ ಮೊದಲಾದ ಸಮುದ್ರ ಜೀವಿಗಳು ಸಾವಿಗೀಡಾಗಿ ದಡ ಸೇರುವುದು ಮುಂದುವರಿದಿದೆ. ಮೇ 15 ರಂದು ಸಮುದ್ರಜೀವಿಗಳ ಕಳೇಬರ ಪತ್ತೆಯಾದ ಬೆನ್ನಲ್ಲೇ ಸಸಿಹಿತ್ಲು ಅಗ್ಗಿದಕಳಿಯ ಎಂಬಲ್ಲಿ ಸಮುದ್ರಕಿನಾರೆಯಲ್ಲಿ ಡಾಲ್ಫಿನ್ ಮೀನಿನ ಮೃತದೇಹ ಪತ್ತೆಯಾಗಿದೆ. ಮುಕ್ಕ ಬಳಿ ಇನ್ನೊಂದು ಡಾಲ್ಫಿನ್ ಮೀನಿನ ಮೃತದೇಹ ಎರಡು ದಿನ ಹಿಂದೆ ದಡ ಸೇರಿದೆ. ಇದೇ ವೇಳೆ ಕಡಲಾಮೆಯ ಮೃತದೇಹ ಸಮುದ್ರ ತೀರದಲ್ಲಿ ಕಂಡು ಬಂದಿದ್ದರೂ ಬಳಿಕ ಸಮುದ್ರ ಸೇರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಭಾನುವಾರ ಅರಣ್ಯ ವಿಭಾಗದ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲಿಸಿದ್ದರು. ಮಾತ್ರವಲ್ಲದೆ ಸಮಗ್ರ ವರದಿ ಕಲೆ ಹಾಕಿ ಸಮುದ್ರ ತೀರದಲ್ಲಿ ಬಿದ್ದಿರುವ ತೈಲ ಜಿಡ್ಡು, ಡಾಲ್ಫಿನ್ ಕಳೇಬರ ಛಾಯಾಚಿತ್ರ ಸಂಗ್ರಹಿಸಿದ್ದಾರೆ. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಕಳೇಬರವನ್ನು ಮರಳಿನಲ್ಲಿ ಹೂತು ಹಾಕಲಾಯಿತು. ಮೂರು ವಾರದ ಹಿಂದೆ ಸುರತ್ಕಲ್ ಬಳಿಯ ಗುಡ್ಡೆಕೊಪ್ಲ, ತಣ್ಣೀರುಬಾವಿ ಬಳಿ ಎರಡು ಡಾಲ್ಫಿನ್ ಹಾಗೂ ಗುಡ್ಡೆಕೊಪ್ಲ, ಹೊಸಬೆಟ್ಟು ಬಳಿ ಎರಡು ಕಡಲಾಮೆ ಮೃತದೇಹಗಳು ದೊರಕ್ಕಿದ್ದವು.
ರೀಫ್ ವಾಚ್ ಸಮುದ್ರ ಸಂಶೋಧನ ತಂಡವು ಸ್ಥಳಕ್ಕೆ ಆಗಮಿಸಿ ಸ್ಥಳೀಯ ಮೀನುಗಾರರಿಗೆ ಮಾಹಿತಿ ನೀಡಿದ್ದು ಸಮುದ್ರ ಜಲಚರಗಳ ಕಳೇಬರ ಪತ್ತೆಯಾದರೆ ಸೂಕ್ತ ಮಾಹಿತಿ ನೀಡುವಂತೆ ಮನವಿ ಮಾಡಿದೆ. ಬದುಕಿದ್ದರೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಿ ಬದುಕಿಸಲು ಸಾಧ್ಯವಾಗುತ್ತದೆ. ಸತ್ತಿದ್ದರೆ ಸಾವಿಗೆ ಕಾರಣ ತಿಳಿಯಲು ಸಹಕಾರಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಮಾಹಿತಿಗಾಗಿ 9740892394 ಈ ಸಂಖ್ಯೆ ಸಂಪರ್ಕಿಸುವಂತೆ ವಿನಂತಿಸಿದ್ದಾರೆ .
ಸಮುದ್ರಜೀವಿಗಳ ಸಾವಿಗೆ ಸಮುದ್ರ ಮಾಲಿನ್ಯ ಕಾರಣ ಆಗಿರಬಹುದು ಎಂದು ಮೀನುಗಾರರು ಶಂಕೆ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳಿನಿಂದ ತಣ್ಣೀರುಬಾವಿಯಿಂದ ಸಸಿಹಿತ್ಲುವರೆಗೆ ಆಯಿಲ್ ತಾಜ್ಯದ ಜಿಡ್ಡು ಸತತವಾಗಿ ಕಂದುಬರುತ್ತಿದ್ದು ಸಮುದ್ರಜೀವಿಗಳ ಮೈಮೇಲೆ ತೈಲ ಜಿಡ್ಡು ಸತತವಾಗಿ ಕಂಡುಬರುತ್ತಿದ್ದು, ಸಮುದ್ರ ಮಾಲಿನ್ಯ ಹೆಚ್ಚಿದಂತೆ ಅಮ್ಲಜನಕ ಪ್ರಮಾಣ ಕಡಿಮೆ ಆಗಿ ಮೀನುಗಳು ಕಡಲಾಮೆಗಳು ಉಸಿರುಗಟ್ಟಿ ಸಾಯುವ ಸಾಧ್ಯತೆ ಇದೆ ಎಂಬುವುದು ಮೀನುಗಾರ ಆರೋಪವಾಗಿದೆ.