ಉಡುಪಿ, ಜೂ 02: (Daijiworld News/SM): ರಾಜ್ಯದಲ್ಲಿ ಮಳೆಯಾಗದ ಕಾರಣ ಎಲ್ಲೆಡೆ ನೀರಿನ ಸಮಸ್ಯೆಯಾಗಿದೆ. ಉಡುಪಿ ನಗರದಲ್ಲಿ ನೀರಿನ ಅಭಾವ ಮಿತಿಮೀರಿದ ಹಿನ್ನೆಲೆಯಲ್ಲಿ ಇಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಕೆ ರಘುಪತಿ ಭಟ್ ಬಜೆ ಡ್ಯಾಂಗೆ ಭೇಟಿ ನೀಡಿದರು.
ನೀರಿನ ಮಟ್ಟ ಹಾಗೂ ಪಂಪ್ ಅಳವಡಿಸಿರುವ ಬಗ್ಗೆ ಪರಿಶೀಲನೆ ನಡೆಸಿದರು. ಈ ಹಿಂದೆ ಶಾಸಕ ಕೆ ರಘುಪತಿ ಭಟ್ ಬಜೆ ಡ್ಯಾಂಗೆ ಬರಬೇಕಾಗಿದ್ದ ನೀರಿನ ಅಡೆತಡೆಗಳನ್ನು ನಿವಾರಿಸಿ ನಗರಕ್ಕೆ ನೀರು ಬರಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಹೂಳೆತ್ತುವ ಕೆಲಸವನ್ನೂ ಖುದ್ದು ಶಾಸಕರ ನೇತೃತ್ವದಲ್ಲಿ ನಡೆದಿತ್ತು. ಇದೀಗ ಹೆಚ್ಚಿನ ಅನುಕೂಲವಾಗುವಂತೆ ಮತ್ತೆ ಸಂಸದರು ಹಾಗೂ ಶಾಸಕರು ಬಜೆ ಡ್ಯಾಂ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಂದೆ ಅನುಸರಿಸಬೇಕಾದ ಕ್ರಮಗಳನ್ನು ಕೈಗೊಂಡು ಸಮಸ್ಯೆ ಬಾರದ ರೀತಿಯಲ್ಲಿ ಗಮನಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಕಬ್ಬೆಟ್ಟು ಪ್ರವೀಣ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ನಗರಾಧ್ಯಕ್ಷ ಪ್ರಭಾಕರ್ ಪೂಜಾರಿ, ಉಡುಪಿ ನಗರಸಭೆಯ ಚುನಾಯಿತ ಸದಸ್ಯರು ಉಪಸ್ಥಿತರಿದ್ದರು.ಅಪರ ಜಿಲ್ಲಾಧಿಕಾರಿ ಶ್ರೀ ವಿದ್ಯಾ, ನಗರಸಭೆಯ ಅಧಿಕಾರಿಗಳು ಸೇರಿದಂತೆ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.