ಉಡುಪಿ, ಜೂ 02: (Daijiworld News/SM): ರಾಜ್ಯದ ಸಂಸದರೆಲ್ಲ ಸೇರಿ ಕೇಂದ್ರಕ್ಕೆ ಒತ್ತಡ ತಂದು ಕರಾವಳಿ ತೀರದಲ್ಲಿ ಸಿಆರ್ಝಡ್ ವ್ಯಾಪ್ತಿಯನ್ನು 50 ಮೀಟರ್ಗೆ ಇಳಿಸಲು ಪ್ರಯತ್ನ ನಡೆಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ.
ಪಡುಬಿದ್ರಿ ಬಿಜೆಪಿ ಮಹಾಶಕ್ತಿಕೇಂದ್ರದ ವತಿಯಿಂದ ಶುಭಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.ಹೆಜಮಾಡಿ ಬಂದರು, ಮಲ್ವೆಯಿಂದ ಕರಾವಳಿವರೆಗೆ ಪೂರ್ಣಪ್ರಮಾಣದ ಗುಣಮಟ್ಟದ ಹೆದ್ದಾರಿ ನಿರ್ಮಾಣದ ಗುರಿಯನ್ನು ಮುಂದಿನ ದಿನಗಳಲ್ಲಿ ಇರಿಸಿಕೊಳ್ಳಲಾಗಿದೆ. ಪೆಟ್ರೋಲಿಯಂ ಉತ್ಪನ್ನದಲ್ಲಿ ಮೀನುಗಾರಿಕಾ ಡೀಸೆಲ್ ತೆರಿಗೆ ಸರಿದೂಗಿಸುವ ಬಗ್ಗೆಯೂ ಪ್ರಯತ್ನ ಮಾಡಲಾಗುವುದು. ಇದು ಪೂರ್ವ-ಪಶ್ಚಿಮದ ಸಮುದ್ರ ಮೀನುಗಾರರಿಗೆ ಅನುಕೂಲವಾಗಲಿದೆ. ಕೇಂದ್ರದಲ್ಲಿ ಮೀನುಗಾರಿಕಾ ಪ್ರತ್ಯೇಕ ಸಚಿವಾಲಯ ರಚನೆಯಿಂದ ಮೀನುಗಾರರ ಸಮಸ್ಯೆಗಳನ್ನು ಗಮನಕ್ಕೆ ತಂದು ಪರಿಹರಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ದಶಕಗಳ ಹಿಂದೆ ಆರಂಭವಾದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಅಪೂರ್ಣ ಕಾಮಗಾರಿಯ ಬಗ್ಗೆ 17 ರಂದು ನಡೆಯುವ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಅದನ್ನು ಪೂರ್ಣಗೊಳಿಸಲು ವಿಶೇಷ ಪ್ರಯತ್ನ ಮಾಡಲಾಗುವುದು. ಬ್ಲೂಫ್ಲ್ಯಾಗ್ ಬೀಚ್ ಯೋಜನೆಗೆ ಪ್ರವಾಸೋದ್ಯಮದಿಂದ 8 ಕೋಟಿ ಅನುದಾನ ತರಲಾಗಿದ್ದು, ಪರಿಸರ, ಸಿಆರ್ಝಡ್ನಿಂದ ಕಾಮಗಾರಿ ಕುಂಠಿತವಾಗಿದೆ. ಈ ಯೋಜನೆಗೆ ಇನ್ನಷ್ಟು ಅನುದಾನ ತಂದು ಪ್ರವಾಸೋದ್ಯಮ ಉತ್ತೇಜಿಸಲು ಗಮನ ನೀಡಲಾಗುವುದು. ಕಾಯ್ದೆಯಿಂದ ಕೊಂಕಣ ರೈಲ್ವೆ ದ್ವಿಪಥ ಹಾಗೂ ವಿದ್ಯುತ್ತೀಕರಣಗೊಳಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಬೂತ್ ಪ್ರಮುಖರನ್ನು ಗೌರವಿಸಲಾಯಿತು. ಶಾಸಕ ಲಾಲಾಜಿ ಆರ್ ಮೆಂಡನ್, ಪಕ್ಷದ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸದಸ್ಯರಾದ ಶಶಿಕಾಂತ ಪಡುಬಿದ್ರಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.