ಉಡುಪಿ, ಅ.16(DaijiworldNews/AA): ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ಮಕ್ಕಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ಕೇರಳದ ಸಂಘಟನೆಗಳು ಮುಂದಾಗಿವೆ.
ಈಶ್ವರ್ ಮಲ್ಪೆ ಅವರ ಮಕ್ಕಳಾದ ಕಾರ್ತಿಕ್ (23) ಮತ್ತು ಬ್ರಾಹ್ಮಿ(7) ಅವರನ್ನು ಅಗತ್ಯ ಚಿಕಿತ್ಸೆಗಾಗಿ ಕೇರಳದ ಕೋಯಿಕ್ಕೋಡ್ನಲ್ಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳಿಬ್ಬರೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ಹಲವಾರು ಲಕ್ಷ ರೂ. ಅಗತ್ಯವಿದೆ.
ಶಿರೂರಿನಲ್ಲಿ ಭೂಕುಸಿತದಿಂದ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಅರ್ಜುನ್ ಮೃತದೇಹವನ್ನು ಹೊರತೆಗೆಯುವಲ್ಲಿ ಈಶ್ವರ್ ಮಲ್ಪೆ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಈ ಪ್ರಯತ್ನವು ಕೇರಳದಲ್ಲಿ ವ್ಯಾಪಕವಾದ ಮನ್ನಣೆ ಹಾಗೂ ಮೆಚ್ಚುಗೆ ಗಳಿಸಿದ್ದವು. ಇದೀಗ ಕೇರಳದ ಸಂಸ್ಥೆಗಳು ಅವರನ್ನು ಬೆಂಬಲಿಸಲು ಮುಂದಾಗಿವೆ.
ಸದ್ಯ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂಬ ನಂಬಿಕೆ ಇದೆ. ಸಂಘಟನೆಗಳ ಪ್ರತಿನಿಧಿಗಳು ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ವೆಚ್ಚವನ್ನು ಭರಿಸಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರ್ ಮಲ್ಪೆ ಅವರು, ಉಡುಪಿ ಮತ್ತು ಇತರ ಕರಾವಳಿ ಭಾಗದ ಜನರು ನನ್ನ ಕುಟುಂಬಕ್ಕೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಆದರೆ, ಈವರೆಗೆ ಸರಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಪ್ರಸ್ತುತ ನನ್ನ ಮಕ್ಕಳ ಚಿಕಿತ್ಸೆಗಾಗಿ ನಾನು ಕೇರಳದಲ್ಲಿದ್ದೇನೆ ಎಂದು ತಿಳಿಸಿದರು.