ಉಳ್ಳಾಲ, ಅ.16(DaijiworldNews/AA): ಸಾಂವಿಧಾನಿಕ ವಾಕ್ ಸ್ವಾತಂತ್ರ್ಯ ಪ್ರತಿಪಾದಿಸಿ ಧರ್ಮದ ವಿಚಾರಧಾರೆ ಕುರಿತು ಹಿಂದೂ ಸಮಾಜಕ್ಕೆ ಹೇಳಿರುವ ಉಪನ್ಯಾಸಕನ ವಿರುದ್ಧ ರಾಜ್ಯ ಸರ್ಕಾರ ಪ್ರಕರಣ ದಾಖಲಿಸುತ್ತದೆ. ಆದರೆ ಅಸಾಂವಿಧಾನಿಕವಾಗಿ ಧರ್ಮವನ್ನು ಹಿಯ್ಯಾಳಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸದೇ ಇರುವುದು ತಾರತಮ್ಯವಲ್ಲವೇ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಆಕ್ರೋಶ ವ್ಯಕ್ತಪಡಿಸಿದರು.
ಸಾಹಿತಿ ಹಾಗೂ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಮಾಡಿದ ಹಿಂದೂ ಧರ್ಮ ಜಾಗೃತಿಯ ಭಾಷಣದ ವಿರುದ್ಧ ದಾಖಲಾಗಿರುವ ಸುಮೊಟೊ ಕೇಸನ್ನು ಹಿಂಪಡೆಯಲು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಉಳ್ಳಾಲ ಪ್ರಖಂಡದ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಿನ್ಯಾದಲ್ಲಿ ಜರಗಿದ ನವ ದಂಪತಿ ಸಮಾವೇಶದಲ್ಲಿ ನವ ವಿವಾಹಿತರಾಗಿ ಭಾಗವಹಿಸಿದ್ದ ಉಪನ್ಯಾಸಕ ಅರುಣ್ ಉಳ್ಳಾಲ್, ಹಿಂದೂಗಳು ಹಿಂದೂಗಳ ಸಭಾಂಗಣಗಳಲ್ಲೇ ಮದುವೆಯಾಗಿ ಎಂದು ಸಮಾಜಕ್ಕೆ ಕಿವಿಮಾತು ಹೇಳಿದ್ದಾರೆಯೇ ಹೊರತು ಯಾವುದೇ ಧರ್ಮವನ್ನು ನಿಂದಿಸಿಲ್ಲ. ಧರ್ಮದ ಬಗ್ಗೆ ಜಾಗೃತಿ ಮಾತುಗಳನ್ನಾಡಲೂ ಇಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲವೇ? ಧರ್ಮ ಜಾಗೃತಿಯ ಮಾತುಗಳನ್ನಾಡಿದರೆ ಸುಮೋಟೊ ಪ್ರಕರಣ ದಾಖಲಿಸುತ್ತಾರೆ. ಸಿದ್ಧರಾಮಯ್ಯ ನೇತೃತ್ವದ ಸರಕಾರದಲ್ಲಿ ಹಿಂದೂ ದೈವ, ದೇವರುಗಳನ್ನು ತುಚ್ಚವಾಗಿ ನಿಂದಿಸಿದವರಿಗೆ ಪುರಸ್ಕಾರ ನೀಡಲಾಗುತ್ತಿದೆ ಎಂದು ಕಿಡಿ ಕಾರಿದರು.
ಬಜರಂಗದಳ ಉಳ್ಳಾಲ ನಗರ ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು ಮಾತನಾಡಿ, ಭಾರತ ಮಾತೆಗೆ ಜೈಕಾರ ಹಾಕಿದವರ ಮೇಲೆ ಕೇಸ್ ಹಾಕುವ ಸರ್ಕಾರ ಇದ್ದರೆ ಅದು ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ. ಅರುಣ್ ಉಳ್ಳಾಲ್ ಏಕಾಂಗಿಯಲ್ಲ ಹಿಂದೂ ಸಮಾಜ, ಹಿಂದೂ ಸಂಘಟನೆಗಳು ಅವರ ಜೊತೆಗೆ ನಿಲ್ಲುತ್ತದೆ. ಯಾವುದೇ ತಪ್ಪು ಮಾಡದ ವಿದ್ಯಾವಂತ ಸಾಹಿತಿ ಅರುಣ್ ಉಳ್ಳಾಲ್ ಮೇಲಿನ ಕೇಸು ದಾಖಲಿಸಿರುವ ನಡೆ ಖಂಡನೀಯ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ನ ಮಠ, ಮಂದಿರ, ಅರ್ಚಕ ವಿಭಾಗ ಪ್ರಮುಖ್ ಪೊಳಲಿ ಗಿರಿಪ್ರಕಾಶ್ ತಂತ್ರಿ, ವಿ.ಹಿಂ.ಪ ಜಿಲ್ಲಾಧ್ಯಕ್ಷರಾದ ಹೆಚ್.ಕೆ ಪುರುಷೋತ್ತಮ್, ಉಪಾಧ್ಯಕ್ಷರಾದ ಮನೋಹರ್ ಸುವರ್ಣ, ಪ್ರಮುಖರಾದ ಕೃಷ್ಣ ಮೂರ್ತಿ, ಗೋಪಾಲ ಕುತ್ತಾರು, ನಾರಾಯಣ ಕುಂಪಲ, ರವಿ ಅಸೈಗೋಳಿ, ಗುರುಪ್ರಸಾದ್ ಕಡಂಬಾರ್, ಶಿವಪ್ರಸಾದ್ ಕೊಣಾಜೆ, ಕಿಶನ್ ತಾರಿಪಡ್ಪು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ನಾಗೇಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರಾಧ್ಯಕ್ಷರಾದ ಜಗದೀಶ ಆಳ್ವ ಕುವೆತ್ತಬೈಲು, ಕ್ಷೇತ್ರ ಮಹಿಳಾ ಮೋರ್ಚದ ಅಧ್ಯಕ್ಷೆ ಮಾಧವಿ ಉಳ್ಳಾಲ್, ಯುವ ಮೋರ್ಚದ ಅಧ್ಯಕ್ಷ ಮುರಳಿ ಕೊಣಾಜೆ, ಪ್ರಮುಖರಾದ ಚಂದ್ರಶೇಖರ್ ಉಚ್ಚಿಲ್, ಲಲಿತಾ ಸುಂದರ್, ಜಗದೀಶ ಶೇಣವ ಮೊದಲಾದವರು ಉಪಸ್ಥಿತರಿದ್ದರು.
ವಿ.ಹಿಂ.ಪ ಜಿಲ್ಲಾ ಪ್ರಚಾರ ಮತ್ತು ಪ್ರಸಾರ ವಿಭಾಗದ ಪ್ರಮುಖ್ ಆಶಿಕ್ ಗೋಪಾಲಕೃಷ್ಣ ಸ್ವಾಗತಿಸಿ ನಿರೂಪಿಸಿದರು. ಬಜರಂಗದಳ ಉಳ್ಳಾಲ ನಗರ ಪ್ರಖಂಡ ಸಂಯೋಜಕರಾದ ಅರ್ಜುನ್ ಮಾಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಹರಿಪ್ರಸಾದ್ ಕೈರಂಗಳ ವಂದಿಸಿದರು.