ಬಂಟ್ವಾಳ, ಅ.16(DaijiworldNews/AA): ಗಣಪತಿಯನ್ನಿಡಲು ಹತ್ತಾರು ಕಾನೂನುಗಳನ್ನು ಜಾರಿಗೆ ತಂದ ಕಾಂಗ್ರೆಸ್, ರಾಷ್ಟ್ರ ಭಕ್ತಿಯ ಸಂಘಟನೆ ಆರ್ ಎಸ್ ಎಸ್ ಹಾಗೂ ಭಜರಂಗಿಗಳನ್ನು ದೇಶದ್ರೋಹಿ ಸಂಘಟನೆ ಎನ್ನುತ್ತಿದೆ, ಕೇವಲ ಅಲ್ಪಸಂಖ್ಯಾತರ ಬಲದಿಂದ ಅಧಿಕಾರಕ್ಕೆ ಬಂದಿದ್ದೇವೆ ಎನ್ನುವ ಭ್ರಮೆ ಇವರಲ್ಲಿದೆಯೇ..? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಇವರ ಪರವಾಗಿ ಬ್ರಹ್ಮರಕೂಟ್ಲುವಿನ ಬಂಟರಭವನದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರದ ಪ್ರತಿ ನಡೆಯೂ ಜನವಿರೋಧಿಯಾಗುತ್ತಿದ್ದು, ವಿಪಕ್ಷ ಬಿಜೆಪಿ, ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿದೆ ಎಂದರು.
ಸಿದ್ಧರಾಮಯ್ಯ ಪ್ರಾಮಾಣಿಕ ಮುಖ್ಯಮಂತ್ರಿ...!
ಸಿದ್ಧರಾಮಯ್ಯರನ್ನು ವಿಪಕ್ಷ ನಾಯಕರು ಭ್ರಷ್ಟಾಚಾರಿ ಎಂದೆಲ್ಲಾ ಆರೋಪಿಸುತ್ತಾರೆ, ಆದರೆ ನನ್ನ ಲೆಕ್ಕಾಚಾರದಲ್ಲಿ ಸಿದ್ಧರಾಮಯ್ಯ ಓರ್ವ ಪ್ರಾಮಾಣಿಕ ಮುಖ್ಯಮಂತ್ರಿ ಎನ್ನುವ ಮೂಲಕ ಬಿ.ವೈ ವಿಜಯೇಂದ್ರ ಅವರು ಸಭಿಕರನ್ನು ಅಚ್ಚರಿಗೆ ತಳ್ಳಿದರು. ಮಾತು ಮುಂದುವರಿಸಿದ ಅವರು, ರಾಜ್ಯಾಧ್ಯಕ್ಷರಿಗೆ ತಲೆಕೆಟ್ಟಿದೆಯಾ ಎಂದುಕೊಳ್ಳಬೇಡಿ. ನಮ್ಮ ಹೋರಾಟಕ್ಕೆ ಹೆದರಿ ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಹಗರಣವನ್ನು ಒಪ್ಪಿಕೊಂಡಿರುವುದು, ಪರಿಹಾರ ಕೇಳದೆ ಮೂಡಾದ ಸೈಟು ವಾಪಾಸು ಕೊಟ್ಟು ತಮ್ಮ ತಪ್ಪನ್ನು ಒಪ್ಪಿರುವುದು ಪ್ರಾಮಾಣಿಕತೆ ಅಲ್ಲವೇ ಎಂದು ವ್ಯಂಗ್ಯವಾಡಿದರು.
ಅಹಿಂದದ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಆ ವರ್ಗದವರ ವಿರುದ್ಧವೇ ಆಡಳಿತ ನಡೆಸುತ್ತಿದ್ದಾರೆ. ಭಷ್ಟಚಾರ ರಹಿತ ಆಡಳಿತ ನಡೆಸುತ್ತೇವೆ ಎಂದವರು, ಎಲ್ಲದರಲ್ಲೂ ಭ್ರಷ್ಟಾಚಾರ ನಡೆಸಿ ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ ಎಂದರು.
ಕಿಶೋರ್ ಸಮರ್ಥ ಅಭ್ಯರ್ಥಿ..
ಪರಿಷತ್ ಉಪಚುನಾವಣೆಗೆ ಅನೇಕ ಹಿರಿಯರು ಕಿಶೋರ್ ಕುಮಾರ್ ಹೆಸರು ಉಲ್ಲೇಖಿಸಿದ್ದರು. ಆಗ ಸ್ವತಃ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಕಿಶೋರ್ ಒಬ್ಬ ಸಂಘದ ಕಟ್ಟಾಳು, ಹಾಗಾಗಿ ಅಭ್ಯರ್ಥಿ ಆಗಲೇ ಬೇಕು, ಸಂಘದ ಗಟ್ಟಿ ನೆಲದಲ್ಲಿ ಬಿಜೆಪಿ ಮತ್ತೊಮ್ಮೆ ಗೆಲ್ಲಲೇಬೇಕು ಎಂದು ಬಿಜೆಪಿ ತೀರ್ಮಾನಿಸಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆ, ಒಬ್ಬರು ಜಿಲ್ಲಾ ಉಸ್ತುವಾರಿ ಸಚಿವರನ್ನು ಬಿಟ್ಟರೆ ಬೇರೆ ಯಾವ ಸಚಿವರೂ ದ.ಕ ಜಿಲ್ಲೆಗೆ ಬರುತ್ತಿಲ್ಲ. ಇಲ್ಲಿ ಓಟ್ ಸಿಗಲ್ಲ ಅಂತ ಜಿಲ್ಲೆಗೆ ಯಾರೂ ಬರ್ತಾ ಇಲ್ಲಾನುದಾನ ಕೊಡ್ತಾ ಇಲ್ಲ, ಹಾಗೆಂದು ಬೇರೆ ಜಿಲ್ಲೆಗಳಿಗೆ ಅನುದಾನ ಕೊಡ್ತಾ ಇದಾರಾ ಅಂದ್ರೆ ಅದೂ ಇಲ್ಲ ಅನುದಾನ ಬರ್ತಿಲ್ಲ ಅಂತ ಅವರದ್ದೇ ಶಾಸಕ ರಾಜು ಕಾಗೆ ಆಳಲು ತೋಡಿಕೊಳ್ತಾ ಇದಾರೆ. ಗ್ರಾ.ಪಂ.ಗಳಿಗೂ ಇವರು ಅನುದಾನವನ್ನೇ ಕೊಡ್ತಾ ಇಲ್ಲ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗ್ರಾ.ಪಂ ಸದಸ್ಯರಿಗೂ ಗೌರವ ಇಲ್ಲದಾಗಿದೆ ಎಂದು ವಿಜಯೇಂದ್ರ ತಿಳಿಸಿದರು.
ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಬಿಜೆಪಿ ಯ ಭದ್ರ ಕೋಟೆ ಯಾಗಿರುವ ಕರಾವಳಿ ಹಾಗೆಯೇ ಮುಂದುವರಿಯಬೇಕು. ಹಗರಣಗಳಲ್ಲಿ ಮುಳುಗಿದ ಸರ್ಕಾರದ ನೀತಿಗಳಿಂದ ಸರ್ಕಾರ ಪಾಪರ್ ಆಗಿದ್ದು, ಈ ಸರ್ಕಾರ ತೊಲಗಿದರೆ ಮಾತ್ರ ಅಭಿವೃದ್ಧಿಗೆ ಅನುದಾನ ಒದಗಲು ಸಾಧ್ಯ ಎಂದರು.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯ ತಳಪಾಯದ ಒಂದೊಂದೇ ಕಲ್ಲುಗಳನ್ನು ತೆಗೆಯುತ್ತಾ ಇದೆ. ಗ್ರಾ.ಪಂ.ಸದಸ್ಯರಿಗೆ ಗೌರವಧನ ಕೊಟ್ಟದ್ದು ಯಡಿಯೂರಪ್ಪ ಸರ್ಕಾರ ಎಂಬುದನ್ನು ನೆನಪಿಲ್ಲಿರಬೇಕು ಎಂದರು.
ಸಹಪ್ರಭಾರಿ ಸುಧಾಕರ ರೆಡ್ಡಿ ಮಾತನಾಡಿ, ಭ್ರಷ್ಟಾಚಾರದಲ್ಲಿಯೇ ಮುಳುಗಿ, ಜನವಿರೋಧಿಯಾಗಿರುವ ಕಾಂಗ್ರೆಸ್ ಗೆ ಮತ ಕೇಳುವ ಯಾವ ನೈತಿಕತೆಯೂ ಉಳಿದಿಲ್ಲ ಎಂದರು.
ದ.ಕ. ಸಂಸದ ಬೃಜೇಶ್ ಚೌಟ ರು ಮಾತನಾಡಿ, ಸಣ್ಣ ಸಮುದಾಯಕ್ಕೆ ಸೇರಿದ ಬಿಜೆಪಿ ಕಾರ್ಯಕರ್ತ ಕಿಶೋರ್ ರನ್ನು ಗೆಲ್ಲಿಸುವ ಮೂಲಕ, ಹಿಂದುತ್ವದ, ಪಂಚಾಯತ್ ಸದಸ್ಯರ ಹಾಗೂ ಕಾರ್ಯಕರ್ತರ ಧ್ವನಿಯಾಗಿ ಕೆಲಸಮಾಡಲು ಮತದಾರರು ಅವಕಾಶ ಕೊಡಬೇಕು ಎಂದರು.
ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರು ಮಾತನಾಡಿ, ಕಾಂಗ್ರೇಸ್ ಸರ್ಕಾರ ಪಾಪದವರ ದುಡ್ಡಿನಲ್ಲಿ ಬದುಕುತ್ತಿರುವ ಪಾಪಿಗಳ ಸರ್ಕಾರವಾಗಿದ್ದು, ಶೀಘ್ರ ಪತನವಾಗಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಮಾತನಾಡಿ, ಪುತ್ತೂರಿನಲ್ಲಿ ಗೂಂಡಾಗಿರಿಯ ರಾಜಕಾರಣ ನಡೆಯುತ್ತಿದ್ದ ಕಾಲದಲ್ಲಿಯೂ ಜನಸಂಘಕ್ಕೆ ಶಕ್ತಿಯಾಗಿದ್ದ ರಾಮಣ್ಣ ಭಂಡಾರಿಯವರು ಕುಟುಂಬದಲ್ಲಿ ಬೆಳೆದ ಕಿಶೋರ್ ಗೆ ಅವಕಾಶ ಕೊಟ್ಟಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಘೋಷಣೆಯಾದಾಗಲೇ ನಾವು ಈ ಕ್ಷೇತ್ರವನ್ನು ಗೆದ್ದಿದ್ದೇವೆ, ಈ ಬಾರಿ 2 ಸಾವಿರಕ್ಕೂ ಅಧಿಕ ಅಂತರದಲ್ಲಿ ಗೆಲ್ಲುತ್ತೇವೆ ಎಂದರು.
ಅಭ್ಯರ್ಥಿ ಕಿಶೋರ್ ಕುಮಾರ್ ಮಾತನಾಡಿ, ಈ ಚುನಾವಣೆಯಲ್ಲಿನನ್ನನ್ನು ಆಶೀರ್ವದಿಸಿ, ಮುಂದಿನ 3 ತಿಂಗಳ ಒಳಗಾಗಿ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಮಾಡುತ್ತೇನೆ ಎಂದರು.
ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹ ಉಸ್ತುವಾರಿ ಪ್ರತಾಪ ಸಿಂಹ ನಾಯಕ್, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ವಿ.ಸುನಿಲ್ಕುಮಾರ್, ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ, ಭಾಗೀರಥಿ, ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಜನತಾ ದಳದ ಜಿಲ್ಲಾಧ್ಯಕ್ಷರಾದ ಜಾಕೆ ಮಾಧವ ಗೌಡ, ಮಂಗಳೂರು ಮೇಯರ್ ಮನೋಜ್ಕುಮಾರ್,ಉಪಮೇಯರ್ ಭಾನುಮತಿ, ಮಾಜಿಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ನೆಲ್ಯಾಡಿ ಗ್ರಾ.ಪಂ. ಸದಸ್ಯರಾದ ಜಯಾನಂದ ಬಂಟ್ರಿಯಾಲ್ ದಂಪತಿ ಬಿಜೆಪಿ ಸೇರ್ಪಡೆಗೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ದೇವದಾಸ ಶೆಟ್ಟಿ, ರಾಕೇಶ್ ರೈ ಕಡೆಂಜಿ ಕಾರ್ಯಕ್ರಮ ನಿರ್ವಹಿಸಿದರು. ಚುನಾವಣಾ ಪ್ರಭಾರಿ ಕ್ಯಾ.ಗಣೇಶ್ ಕಾರ್ಣಿಕ್ ವಂದಿಸಿದರು.