ವೇಣೂರು,ಅ.15(DaijiworldNews/TA):ವೇಣೂರು ಕಾಲೇಜು ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಮೊಬೈಲ್ ನಂಬರಿಗೆ ಒತ್ತಾಯಿಸಿದ್ದ ಯುವಕನೊಬ್ಬನನ್ನು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ನೆರವಿನಿಂದ ವೇಣೂರು ಪೊಲೀಸರು ಬಂಧಿಸಿದ್ದಾರೆ.
ವೇಣೂರಿನ ಗೋಳಿಯಂಗಡಿಯಲ್ಲಿರುವ ಪ್ರತಿಷ್ಠಿತ ಧರ್ಮಸ್ಥಳ ಐ ಟಿ ಐ ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿನಿಯರನ್ನು ಅವ್ಯಾಚ್ಯ ಶಬ್ದಗಳಿಂದ ಮಾತನಾಡುತ್ತಾ, ನಿನ್ನ ಮೊಬೈಲ್ ನಂಬರ್ ಕೊಡು, ಪ್ರತಿದಿನ ಬೈಕಿನಲ್ಲಿ ಕಾಲೇಜಿಗೆ ಡ್ರಾಪ್ ಮಾಡುತ್ತೇನೆ ಎಂದು ಪೀಡಿಸುತ್ತಿದ್ದನು. ಇದರಿಂದ ಗಾಬರಿಗೊಂಡ ಯುವತಿಯು ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ತಿಳಿಸಿದ್ದಳೆನ್ನಲಾಗಿದೆ.
ಕಾರ್ಯಪ್ರವೃತ್ತರಾದ ಕಾರ್ಯಕರ್ತರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ವೇಣೂರು ಠಾಣಾಧಿಕಾರಿ ಶ್ರೀಶೈಲ ನೇತೃತ್ವದಲ್ಲಿ ಪೊಲೀಸರು ಬಂಟ್ವಾಳ ಸಜೀಪದ ಹುಲ್ಲು ತೆಗೆಯುವ ಮಿಶಿನ್ ರಿಪೇರಿ ಕೆಲಸ ಮಾಡುವ ಜಮಾಲ್ನನ್ನು ಬಂಧಿಸಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.