ಬಂಟ್ವಾಳ,ಅ.15(DaijiworldNews/TA):ಭ್ರಷ್ಟ ಸರ್ಕಾರವನ್ನ ವಜಾ ಮಾಡಲು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಬಂಟ್ವಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕಳೆದ ಒಂದೂವರೆ ವರ್ಷದಲ್ಲೇ ಜನರ ಹಿಡಿಶಾಪಕ್ಕೆ ಒಳಗಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳಿದ್ದಾರೆ.
ವಾಲ್ಮೀಕಿ ಹಗರಣದ ಬಗ್ಗೆ ಸಿಎಂ ಸದನದಲ್ಲೇ ಒಪ್ಪಿದ್ದಾರೆ. ಮೈಸೂರಿನ ಮುಡಾ ಹಗರಣದಲ್ಲೂ ಸಿದ್ದರಾಮಯ್ಯ ಅದೇ ರೀತಿ ಹೇಳಿದ್ದಾರೆ. ಆದರೆ ಯಾವುದೇ ಪರಿಹಾರ ನಿರೀಕ್ಷೆ ಮಾಡದೇ ನಿವೇಶನ ಹಿಂದೆ ಕೊಟ್ಟಿದ್ದಾರೆ. ಮೊದಲು ಪರಿಹಾರ ಕೊಡಿ ಎಂದಿದ್ದ ಸಿದ್ದರಾಮಯ್ಯ ಈಗ ಪರಿಹಾರ ಕೇಳದೇ ಹಿಂದಿರುಗಿಸಿದ್ದಾರೆ. ಈ ಮೂಲಕ ತಪ್ಪು ಮಾಡಿರೋದನ್ನು ಒಪ್ಪಿಕೊಂಡಿದ್ದಾರೆ ಎಂಬುವುದಾಗಿ ಸಿಎಂ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು.
ಕ್ಯಾಬಿನೆಟ್ನಲ್ಲಿ ಹುಬ್ಬಳ್ಳಿ ಗಲಭೆಯ ಆರೋಪಿಗಳ ಕೇಸು ವಾಪಾಸ್ ಪಡೆಯಲಾಗಿದೆ. ದೇಶದ್ರೋಹಿಗಳ ಕೇಸುಗಳನ್ನು ವಾಪಸ್ ಪಡೆಯಲಾಗಿದೆ. ಎನ್ಐಎ ಸೇರಿ ಕರ್ನಾಟಕ ಪೊಲೀಸರು ತನಿಖೆ ನಡೆಸ್ತಾ ಇದ್ದಾರೆ. ಹೀಗಿರುವಾಗ ಕೇಸು ವಾಪಸ್ ಪಡೆದಿರೋದು ಅಪರಾಧ ಎಂಬುವುದಾಗಿ ಹೇಳಿದರು.
ಪರಿಷತ್ ಉಪಚುನಾವಣೆಯ ಕ್ಷೇತ್ರವನ್ನ ಹಾಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿನಿಧಿಸುತ್ತಿದ್ದರು. ಇದೀಗ ಹಿಂದುತ್ವದ ಕಟ್ಟಾಳು ಕಿಶೋರ್ ಕುಮಾರ್ ಪುತ್ತೂರು ಅವರನ್ನು ಕಣಕ್ಕಿಳಿಸಿದ್ದೇವೆ. ಹಾಗಾಗಿ ಇಲ್ಲಿ ನಾವು ದೊಡ್ಡ ಅಂತರದಲ್ಲಿ ಮತ್ತೊಮ್ಮೆ ಗೆಲ್ಲುತ್ತೇವೆ ಎಂಬುವುದಾಗಿ ಬಿ.ವೈ.ವಿಜಯೇಂದ್ರ ಆಶಯ ವ್ಯಕ್ತಪಡಿಸಿದರು.