ಸುಬ್ರಹ್ಮಣ್ಯ,ಜೂ02(DaijiworldNews/AZM):ಕುಕ್ಕೇ ಸುಬ್ರಹ್ಮಣ್ಯ ಆಡಳಿತ ಕಚೇರಿಯಲ್ಲಿ ಮಾರಾಮಾರಿ ನಡೆದಿದ್ದು, ಮಠದ ಅರ್ಚಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಜೂ.1ರಂದು ಶನಿವಾರ ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ಮಠದ ಅರ್ಚಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಅರ್ಚಕರು ದೇವಸ್ಥಾನದ ಮುಂದುಗಡೆ ಮಠಕ್ಕೆ ಬರುವ ಭಕ್ತಾದಿಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ ಗುರುಪ್ರಸಾದ್ ಪಂಜ, ಪ್ರಶಾಂತ್ ಮಾಣಿಲ ಎಂಬವರು ಕುಕ್ಕೇ ಸುಬ್ರಹ್ಮಣ್ಯ ಆಡಳಿತ ಕಚೇರಿಗೆ ಎಳೆದು ಕೊಂಡು ಹೋಗಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕರಿಕಳ ಸೇರಿಕೊಂಡು ಅರ್ಚಕರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು,ಅವರ ಕೆನ್ನೆಗೆ ಹೊಡೆದು ಕಾಲಿನಿಂದ ತುಳಿಯಲಾಗಿದೆ ಎಂದು ಆರೋಪಿಸಲಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಪುತ್ತೂರು ಖಾಸಗೀ ಆಸ್ಪತ್ರೆಗೆ ದಾಖಲು ಪಡಿಸುತ್ತಿರುವ ವೀಡೀಯೋ ದೃಶ್ಯಗಳು ವೈರಲ್ ಆಗಿದೆ.
ಹಲ್ಲೆ ಗೊಳಗಾದ ಅರ್ಚಕರನ್ನು ಕುಮಾರ್ ಬನ್ನಿoತಾಯ(61) ಎಂದು ತಿಳಿದು ಬಂದಿದೆ. ಇವರು ಮಠದಲ್ಲಿ ಅರ್ಚಕರಾಗಿ ಸುಮಾರು 5ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.
ಕಾರಣ
ಸರ್ಪ ಸಂಸ್ಕಾರ ಪೂಜೆಯ ಸಲುವಾಗಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತರನ್ನು ಕ್ಷೇತ್ರದ ಪಕ್ಕದಲ್ಲೇ ಇರುವ ಸಂಪುಟ ನರಸಿಂಹ ಮಠದಲ್ಲಿ ಸರ್ಪ ಸಂಸ್ಕಾರ ನಡೆಸುವಂತೆ ಒತ್ತಾಯಿಸುತ್ತಿದ್ದ ಅರ್ಚಕರನ್ನು ಸಾರ್ವಜನಿಕರು ಹಿಡಿದು ದೇವಸ್ಥಾನದ ಆಡಳಿತ ಮಂಡಳಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅರ್ಚಕರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಹಾಗೂ ಈ ರೀತಿ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದಾದ ಬಳಿಕ ನಡೆದ ಬೆಳವಣಿಗೆಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಭಕ್ತರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಅರ್ಚಕರು ಆರೋಪಿಸಿದ್ದು, ಆಸ್ಪತ್ರೆಗೆ ದಾಖಲಾಗುವ ವೀಡಿಯೋ ವೈರಲ್ ಆಗಿದೆ. ಆದರೆ ಈ ಸಂಗತಿ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಒಳಗಾಗಿದೆ.