ಬಂಟ್ವಾಳ, ಅ.13(DaijiworldNews/AA): ವಿಧಾನಪರಿಷತ್ ಮತದಾನ ಪ್ರಕ್ರಿಯೆ ಸಂದರ್ಭ, ಜಾಗರೂಕತೆಯಿಂದ ಎಚ್ಚರಿಕೆಯಿಂದ ಮತ ಚಲಾಯಿಸಬೇಕು. ಯಾವುದೇ ಉದಾಸೀನ ಮಾಡದೆ, ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಯುವ ನಾಯಕ ಕಿಶೋರ್ ಕುಮಾರ್ ಅವರನ್ನು ಆರಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ನಡೆದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ಬಿಜೆಪಿಯ ಜನಪ್ರತಿನಿಧಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
329 ಚುನಾಯಿತ ಸದಸ್ಯರು ಬಂಟ್ವಾಳ ವಿಧಾನಸಭಾ ಕ್ಷೇತ್ರದಾದ್ಯಂತ ಇದ್ದು, 15ರಂದು ಜಿಲ್ಲಾ ಮಟ್ಟದ ಸಮಾವೇಶ ನಡೆಯಲಿದ್ದು, ಎಲ್ಲರೂ ಭಾಗವಹಿಸಬೇಕು ಎಂದರು. ಜನಪ್ರತಿನಿಧಿಗಳ ಪ್ರತಿನಿಧಿಯಾಗಿ ಪಕ್ಷದ ಅಭ್ಯರ್ಥಿಯಾಗಿರುವ ಯುವ ನಾಯಕರನ್ನು ಕಣಕ್ಕಿಳಿಸಿದೆ. ಉದಾಸೀನ ಮಾಡದೆ ಮತದಾನ ಮಾಡಬೇಕು. ಜನಪ್ರತಿನಿಧಿಗಳಾಗಲು ನಮಗೆ ಪಕ್ಷ ಅವಕಾಶ ಕಲ್ಪಿಸಿದ್ದು, ಇದೇ ರೀತಿ ಕಾರ್ಯಕರ್ತರನ್ನು ವಿಧಾನಪರಿಷತ್ ಚುನಾವಣೆಗೆ ಕಣಕ್ಕಿಳಿಸಿದೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ರಾಜೇಶ್ ನಾಯ್ಕ್ ತಿಳಿಸಿದರು.
ಈ ಸಂದರ್ಭ ಮಾತನಾಡಿದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಇಂದು ಪಕ್ಷ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಯುವಕರಿಗೆ ಅವಕಾಶ ನೀಡುತ್ತಿದ್ದು, ಕಾರ್ಯಕರ್ತರು ಕಾರ್ಯಕರ್ತನೊಬ್ಬನನ್ನು ಗೆಲ್ಲಿಸಬೇಕಾಗಿದೆ. ಬಿಜೆಪಿ ಎಲ್ಲ ಸಮುದಾಯಕ್ಕೂ ಅವಕಾಶಗಳನ್ನು ನೀಡುತ್ತದೆ ಎನ್ನುವುದಕ್ಕೆ ನಮ್ಮ ಅಭ್ಯರ್ಥಿ ಸಾಕ್ಷಿಯಾಗಿದ್ದು, ಕಾರ್ಯಕರ್ತನನ್ನು ಗೆಲ್ಲಿಸಲು ಕಾರ್ಯಕರ್ತರು ಮುಂದಾಗುವ ಚುನಾವಣೆ ಇದಾಗಿದ್ದು, ಮತ ಚಲಾವಣೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ನಮ್ಮೆಲ್ಲರ ಮತವನ್ನು ಸಿಂಧುವಾಗಿಸಬೇಕು ಎಂದರು.
ಅಧ್ಯಕ್ಷತೆಯನ್ನು ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ವಹಿಸಿದರು. ವಿಧಾನಪರಿಷತ್ ಸ್ಥಾನಕ್ಕೆ ಸ್ಪರ್ಧೆಗಿಳಿದ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಪಕ್ಷ ಹೇಳಿದ ಜವಾಬ್ದಾರಿಯನ್ನು ನಿಭಾಯಿಸುವ ವಿಶ್ವಾಸ ತನಗಿದ್ದು, ವಿಧಾನಪರಿಷತ್ ನಲ್ಲೂ ಕೋಟ ಶ್ರೀನಿವಾಸ ಪೂಜಾರಿ ಅವರು ಹಾಕಿಕೊಟ್ಟ ಮಾರ್ಗ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನೆಯಂತೆ ಸಮರ್ಥವಾಗಿ ಕಾರ್ಯನಿರ್ವಹಿಸುವೆ ಎಂದು ಭರವಸೆ ನೀಡಿದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಕ್ಯಾ. ಗಣೇಶ್ ಕಾರ್ಣಿಕ್ ಮಾರ್ಗದರ್ಶನ ನೀಡಿದರು. ಜಿಲ್ಲಾ ಸಂಪರ್ಕ ಪ್ರಮುಖ್ ಬಿ.ದೇವದಾಸ ಶೆಟ್ಟಿ ಅವರು ಚುನಾವಣೆ ಯಾವ ರೀತಿ ಇರುತ್ತದೆ ಯಾವ ರೀತಿ ಮತದಾನ ಮಾಡಬೇಕು ಎಂದರು.
ಚುನಾವಣಾ ಸಹಸಂಚಾಲಕ ರಾಕೇಶ್ ರೈ ಕಡೆಂಜಿ, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ ಕೆ. ಪದ್ಮನಾಭ ಕೊಟ್ಟಾರಿ, ಕ್ಷೇತ್ರ ಕಾರ್ಯದರ್ಶಿಗಳಾದ ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ಪ್ರಭಾಕರ ಪ್ರಭು, ಸಂಜೀವ ಪೂಜಾರಿ ಉಪಸ್ಥಿತರಿದ್ದರು ಮಾತೇಶ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.