ಬಂಟ್ವಾಳ, ಅ.13(DaijiworldNews/AA): ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಾಜುಪೂಜಾರಿಯವರು ಪ್ರತಿಯೊಬ್ಬ ಮತದಾರೂ ಹೆಮ್ಮೆ ಪಡುವಂತ ಅಭ್ಯರ್ಥಿಯಾಗಿದ್ದು, ಅನುಭವದಲ್ಲಿ ಬಿಜೆಪಿ ಅಭ್ಯರ್ಥಿಗಿಂತಲೂ ಸಾಕಷ್ಟು ಮುಂದಿದ್ದಾರೆ. ಎಲ್ಲಾ ಮತದಾರರು ನಾವೇ ಅಭ್ಯರ್ಥಿ ಎಂದು ಭಾವಿಸಿಕೊಂಡು ರಾಜುಪೂಜಾರಿಯವರನ್ನು ಗೆಲ್ಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಶುಕ್ರವಾರ ಸಂಜೆ ನಡೆದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾಯಿತ ಜನಪ್ರತಿನಿಧಿಗಳ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಘಟಕ, ಪಕ್ಷಸಂಘಟನೆ, ಸ್ಥಳೀಯಸಂಸ್ಥೆ ಹಾಗೂ ಸಹಕಾರಿ ಕ್ಷೇತ್ರದ ಅನುಭವ ಹೊಂದಿರುವ ರಾಜುಪೂಜಾರಿಯವರ ಗೆಲುವಿಗೆ ಪ್ರತಿಯೊಬ್ಬರೂ ಉದಾಸೀನ ಹಾಗೂ ನಕಾರಾತ್ಮಕ ಭಾವನೆಗಳನ್ನು ಬದಿಗಿರಿಸಿ ಶಕ್ತಿಮೀರಿ ಕೆಲಸ ಮಾಡಬೇಕು. ಕಾಂಗ್ರೆಸ್ ಮಹಾವೈಭವ ಮತ್ತೆ ದಕ್ಷಿಣಕನ್ನಡದಲ್ಲಿ ಕಾಣಬೇಕೆಂದರೆ ಪ್ರತೀ ಹೆಜ್ಜೆಗಳೂ ದಿಟ್ಟವಾಗಿರಬೇಕು. ದಕ್ಷಿಣ ಕನ್ನಡವನ್ನು ಗೆದ್ದರೆ ಇಡೀ ರಾಜ್ಯ ಗೆದ್ದಂತೆ ಎಂದು ಅವರು ಅಭಿಪ್ರಾಯ ಪಟ್ಟರು.
ಸಿದ್ಧರಾಮಯ್ಯ ನೇತೃತ್ವದ ಸರ್ಕಾರವನ್ನು ಕೆಡವಲು ಬಿಜೆಪಿ ಅಪಪ್ರಚಾರದಲ್ಲಿ ನಿರತವಾಗಿದೆ. ಆದರೆ ಅವರ ಯಾವ ಅಪಪ್ರಚಾರಕ್ಕೂ ಕಿವಿಗೊಡಬೇಡಿ. ರಾಜ್ಯ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ಅವಧಿ ಪೂರ್ತಿ ಮಾಡುತ್ತದೆ ಎಂದು ಸಚಿವರು ತಿಳಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಯವರು ಮಾತನಾಡಿ, ಪಕ್ಷದ ಋಣವನ್ನು ತೀರಿಸಲು ಇದೊಂದು ಒಳ್ಳೆಯ ಅವಕಾಶವಾಗಿದ್ದು, ಜೊತೆಗೆ ಇತರ ಪಕ್ಷದವರ ಮನವೊಲಿಸುವ ಕೆಲಸವನ್ನು ಕಾಂಗ್ರೇಸ್ ಬೆಂಬಲಿತ ಜನಪ್ರತಿನಿಧಿಗಳು ಮಾಡಬೇಕು. ಕಾಂಗ್ರೆಸ್ ಪಂಚಾಯತ್ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತಂದ ವಿಚಾರವನ್ನು ಮನದಲ್ಲಿಟ್ಟುಕೊಳ್ಳಬೇಕು ಎಂದವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ಮಾತನಾಡಿ, ರಾಜುಪೂಜಾರಿಯವರು ಚಿಕ್ಕವಯಸ್ಸಿನಲ್ಲಿಯೇ ಕಾಂಗ್ರೇಸ್ ಪಕ್ಷದ ಒಡನಾಟ ಉಳ್ಳವರಾಗಿದ್ದು, ಗ್ರಾ.ಪಂ, ತಾ.ಪಂ. ಹಾಗೂ ಜಿ.ಪಂ. ನಲ್ಲಿ ಕೆಲಸ ಮಾಡಿದ ಅನುಭವ ಉಳ್ಳವರು. ಇಂತಹಾ ಅಭ್ಯರ್ಥಿ ರಾಜುಪೂಜಾರಿಯವರನ್ನು ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ ಜಯಗಳಿಸುವಂತೆ ಮನವಿ ಮಾಡಿದರು. ಈ ಚುನಾವಣೆಯಲ್ಲಿ ಗೆದ್ದರೆ ಮುಂದಿನ ತಾ.ಪಂ.ಜಿ.ಪಂ. ಚುನಾವಣೆಗೂ ಹೆಚ್ಚು ಸಹಾಯಕವಾಗುತ್ತದೆ ಎಂದರು.
ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿ ರಾಜುಪೂಜಾರಿ ಮಾತನಾಡಿ, ರಮಾನಾಥ ರೈ ಅವರ ಪಕ್ಷ ನಿಷ್ಠೆಯನ್ನು ನಾನು ನೋಡಿಕೊಂಡು ಬೆಳೆದವ, ನನ್ನಂತ ಕಾರ್ಯಕರ್ತನಿಗೆ ಪಕ್ಷ ದೊಡ್ಡ ಅವಕಾಶ ಕೊಟ್ಟಿದೆ, ನಿಮ್ಮೆಲ್ಲರ ಸಹಕಾರ ಈ ಚುನಾವಣೆಯಲ್ಲಿ ನನಗೆ ಅಗತ್ಯವಿದೆ ಎಂದವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪ್ರಮುಖರಾದ ಜಿ.ಎ.ಬಾವ, ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಅಶ್ವಿನ್ ಕುಮಾರ್ ರೈ, ವಾಸು ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ, ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮನಾಭ ರೈ, ಅಬ್ಬಾಸ್ ಅಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್ ವಂದಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.