ಕಾರ್ಕಳ, ಅ.13(DaijiworldNews/AA): ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ತೇಜೋವಧೆ ಮಾತುಗಳನ್ನಾಡಿ ವಾಟ್ಸ್ ಆ್ಯಪ್ ಗಳಲ್ಲಿ ಹರಿಬಿಟ್ಟ ಹಿಂದೂ ಸಂಘಟನೆಯ ಪ್ರಮುಖ ಉಮೇಶ್ ನಾಯ್ಕ ಸೂಡಾನನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದು, ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ದಲಿತ ಮುಖಂಡ ಅಣ್ಣಪ್ಪ ನಕ್ರೆ ಎಂಬವರು ಸಂಘಟನೆಯ ಪ್ರಮುಖರೊಂದಿಗೆ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ತಿಳಿಸಿರುವಂತೆ, ಅ.10 ರಂದು ರಾತ್ರಿ ಗಂಟೆ 9.30 ರ ಸುಮಾರಿಗೆ ಮೊಬೈಲ್ ಪೋನ್ನಿಂದ ವಾಟ್ಸ್ ಆ್ಯಪ್ ಮೆಸೇಜುಗಳನ್ನು ನೋಡಲಾಗಿದ್ದು ಕಾರ್ಕಳ ತಾಲೂಕಿನ ಸೂಡ ಗ್ರಾಮದ ಉಮೇಶ್ ನಾಯ್ಕ ಎನ್ನುವ ವ್ಯಕ್ತಿ ಭಾರತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ರವರ ಕುರಿತು ಮಾನಹಾನಿಕರ ಮತ್ತು ಅವರನ್ನು ಅವರ ಜಾತಿಕಾರಣಕ್ಕೆ ನಿಂದಿಸಿ. ಮಾತಾಡಿರುವ ಸಂದೇಶವೊಂದನ್ನು ಕೇಳಿಸಿಕೊಂಡೆನು.
ಅದರ ಜೊತೆಗೆ ಆ ವ್ಯಕ್ತಿಯು ದಲಿತ ಸಮುದಾಯದ ಜನರ ಕುರಿತು ತೀರಾ ಅವಹೇಳನಕಾರಕವಾಗಿ, ಪರಿಶಿಷ್ಟ-ಜಾತಿಯ ಜನರನ್ನು ಅತ್ಯಂತ ಕೀಳು ಜಾತಿಯವರು. ಸಂಸ್ಕೃತಿ ಹೀನರು ಎಂದು ನಿಂದಿಸಿರುವ ಧ್ವನಿ ಸಂದೇಶವನ್ನು ಕೇಳಿಸಿಕೊಂಡೆನು. ಈ ಸಂದೇಶಗಳು ತುಳು ಭಾಷೆಯಲ್ಲಿದ್ದು, ನನಗೆ ತುಳು ಭಾಷೆ ಗೊತ್ತಿರುವುದರಿಂದ ಅದನ್ನು ಅರ್ಥಮಾಡಿಕೊಂಡಿರುತ್ತೇನೆ ಎಂದು ತಿಳಿಸಿದ್ದಾರೆ.
ಧ್ವನಿ ಸಂದೇಶದಲ್ಲಿ ಉಮೇಶ ನಾಯ್ಕನು ಈ ರೀತಿ ಹೇಳಿರುತ್ತಾನೆ ಎಂದು ಅಣ್ಣಪ್ಪ ನಕ್ರೆ ದೂರಿನಲ್ಲಿ ವಿವರಿಸಿದ್ದಾರೆ. "ನೀವು ಇದ್ದೀರಲ್ಲ? ಎಲ್ಲ ಗುಂಪುಗಳಲ್ಲಿ ಹಾಕು, ಅಂಬೇಡ್ಕರ್ ಫೋಟೋ ಹಾಕಿದ ಕಾರಣ ನಾವು ಈ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡುತ್ತೇವೆ. ಶಿವಾಜಿಯ ಪೋಟೋ ಹಾಕದಿದ್ದರೆ ಅಂಬೇಡ್ಕರ್ ಫೋಟೋ ತೆಗೆಯಲಿ. ನಾವು ದಲಿತರಲ್ಲ. ದಲಿತರು ದನ, ಎತ್ತಿನ ಮಾಂಸ ತಿನ್ನುವರು. ಸ್ಮಶಾನದಲ್ಲಿ ಮಲಗುವವರು ದಲಿತ ಅಂಬೇಡ್ಕರ್ ಪೋಟೋ ಹಾಕಲು ದಲಿತ ಅಂಬೇಡ್ಕರ್ ಯಾರು? ಇವರ ಅಪ್ಪನಾ? ಹೇಳಲಿ. ಕೆಂಬಾರೆಯವರು ಹೇಳಲಿ, ದಲಿತ ಅಂಬೇಡ್ಕರ್ ಅಪ್ಪನಾ? ಅಜ್ಜನಾ? ಶಂಕರ ಅಥವಾ ಪ್ರಕಾಶ್ ನಾಯ್ಕನ ಹೇಳಲಿ. ನನ್ನ ಕುಟುಂಬದವರು ಅಂಬೇಡ್ಕರ್ ಅಂತ ಕುಟುಂಬದವರ ಫೋಟೋ ಬೇಕು ಅಂತ. ಇವರು ತುಂಬಾ ಸಲೀಸು ಅಂತ ಅಂದುಕೊಂಡಿದ್ದಾರೆ. ನನಗೆ ಇವರ ಅಹಂಕಾರ ನಿಲ್ಲಿಸಲು ಗೊತ್ತು. ಇದರನ್ನು ನೋಡಿಕೊಳ್ಳುತ್ತೇನೆ." ಎಂದು ತುಳು ಭಾಷೆಯಲ್ಲಿ ಹೇಳಿರುತ್ತಾರೆ.
ಹೀಗೆ ಹೇಳುವುದರ ಮೂಲಕ ಈ ವ್ಯಕ್ತಿಯು ದೇಶದ ಸಂವಿಧಾನ ಶಿಲ್ಪಿ, ಪ್ರಥಮ ಕಾನೂನು ಮಂತ್ರಿ, ರಾಷ್ಟ್ರ ನಾಯಕರಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾತಿ ಕಾರಣಕ್ಕೆ ಮಾನಹಾನಿಕರವಾಗಿ ಮತ್ತು ಅತ್ಯಂತ ಕೀಳು ಭಾಷೆಯಲ್ಲಿ ಅವರನ್ನು ನಿಂದಿಸಿ, ಸಮಾಜದಲ್ಲಿ ಅಂಬೇಡ್ಕರ್ ರ ಘನತೆಗೆ ಹಾನಿ ಉಂಟು ಮಾಡಿರುತ್ತಾನೆ. ಇದರಿಂದ ಬಾಬಾ ಸಾಹೇಬರನ್ನು ಪೂಜ್ಯ ಭಾವದಿಂದ ನೋಡುತ್ತ ನನ್ನ ಮನಸ್ಸಿಗೆ ಆಘಾತವಾಗಿದೆ. ಅಲ್ಲದೆ ಸಮಾಜದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಹಾನಿ ಆಗಿರುತ್ತದೆ. ದಲಿತ (ಪರಿಶಿಷ್ಟ ಜಾತಿ) ಜನರನ್ನು ಕೀಳು ಜಾತಿಯವರು ಸಂಸ್ಕೃತಿ ಇಲ್ಲದವರು ಎಂದು ಇಡೀ ಜಾತಿ ಸಮುದಾಯವೊಂದನ್ನು ನಿಂದಿಸಿ, ಸಮುದಾಯಗಳ ಮಧ್ಯೆ ಜಾತಿ ಕಾರಣಕ್ಕೆ ದ್ವೇಷ ಉತ್ತೇಜಿಸಿ. ಸಮುದಾಯಗಳ ನಡುವಿನ ಸೌಹಾರ್ದತೆಗೆ ಭಂಗ ತರುವ ಕೃತ್ಯ ನಡೆಸಿರುತ್ತಾನೆ ಎಂದು ದೂರಿನಲ್ಲಿ ಅಣ್ಣಪ್ಪ ನಕ್ರೆ ವಿವರಿಸಿದ್ದಾರೆ.