ಕಾಸರಗೋಡು, ಅ.13(DaijiworldNews/AA): ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗದ ಭರವಸೆ ನೀಡಿ ಡಿವೈಎಫ್ಐ ಮಾಜಿ ನಾಯಕಿ ಹಾಗೂ ಶಾಲಾ ಶಿಕ್ಷಕಿ ಸಚಿತಾ ರೈ ಇನ್ನಷ್ಟು ಮಂದಿಗೆ ವಂಚನೆ ನಡೆಸಿರುವ ಬಗ್ಗೆ ಪ್ರಕರಣಗಳು ಬೆಳಕಿಗೆ ಬರತೊಡಗಿದೆ.
ದೇಲಂಪಾಡಿ ಶಾಂತಿಮಾಲೆಯ ಸುಚಿತ್ರಾ ಎಂಬವರ ದೂರಿನಂತೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಕ್ಲರ್ಕ್ ಉದ್ಯೋಗ ನೀಡುವ ಭರವಸೆ ನೀಡಿ 7,31,500 ರೂ. ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಬದಿಯಡ್ಕ ಠಾಣೆಯಲ್ಲಿ ಮೂರು ಪ್ರಕರಣಗಳು ಸಚಿತಾ ರೈ ವಿರುದ್ದ ದಾಖಲಾಗಿವೆ. ಪುತ್ತಿಗೆ ಬಾಡೂರಿನ ಮಲ್ಲೇಶ್, ಬಳ್ಳಂಬೆಟ್ಟುವಿನ ಶ್ವೇತಾರವರ ದೂರಿನಂತೆ ಈ ಹಿಂದೆ ಎರಡು ಪ್ರಕರಣ ದಾಖಲಿಸಲಾಗಿತ್ತು. ಕುಂಬಳೆ ಕಿದೂರಿನ ನಿಶ್ಮಿತಾ ಶೆಟ್ಟಿಯವರು ವಂಚನೆ ಬಗ್ಗೆ ಕುಂಬಳೆ ಪೊಲೀಸರಿಗೆ ಮೊದಲು ಕೇಸು ನೀಡಿದ್ದು, ಬಳಿಕ ಒಂದೊಂದೆ ಪ್ರಕರಣಗಳು ಬೆಳಕಿಗೆ ಬರತೊಡಗಿದೆ. ನಿಶ್ಮಿತಾ ಶೆಟ್ಟಿ ಅವರಿಗೆ ಸಿಪಿಸಿಆರ್ಐಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಸುಮಾರು 15 ಲಕ್ಷ ರೂ. ವಂಚಿಸಿದ್ದಾಗಿ ದೂರು ನೀಡಲಾಗಿದೆ. ಬಳಿಕ ಹಲವು ವಂಚನೆಗೊಳಗಾದವರು ಠಾಣೆ ಮೆಟ್ಟಲೇರಿದ್ದಾರೆ. ಈ ನಡುವೆ ನಿರೀಕ್ಷಣಾ ಜಾಮೀನು ಕೋರಿ ಸಚಿತಾ ರೈ ನ್ಯಾಯಾಲಯ ಮೊರೆ ಹೋಗಿದ್ದಾರೆ. ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸಚಿತಾ ರೈ ರವರನ್ನು ಸಿಪಿಎಂ ನಿಂದ ಅಮಾನತುಗೊಳಿಸಲಾಗಿದೆ.
ಈತನ್ಮಧ್ಯೆ ಸಚಿತಾ ರಾಯ್ ವಿರುದ್ದ ಇನ್ನೊಂದು ಪ್ರಕರಣ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದೆ. ಎಸ್ಬಿಐ ಶಾಖೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಸುಮಾರು 13,11,600 ರೂ. ಪಡೆದು ವಂಚನೆ ನಡೆಸಿರುವುದಾಗಿ ಕಿದೂರಿನ ಅಶ್ವಿನ್ ರವರ ಪತ್ನಿ ಕೆ. ರಕ್ಷಿತಾ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ರಕ್ಷಿತಾ ಉಪ್ಪಿನಂಗಡಿ ನಿವಾಸಿಯಾಗಿದ್ದು, ಇಲ್ಲಿನ ಬ್ಯಾಂಕ್ ನಿಂದ ಹಣವನ್ನು ಸಚಿತಾ ರೈ ಅವರಿಗೆ ಕಳುಹಿಸಲಾಗಿತ್ತು.