ಪುತ್ತೂರು: ಸೆಪ್ಟಂಬರ್ 7ರಂದು ನಡೆದ ಮಂಗಳೂರು ಚಲೋ ಬೈಕ್ ಜಾಥಾದ ಸಮಯದಲ್ಲಿ ಟ್ರಾಫಿಕ್ ಪೊಲೀಸರು ಭದ್ರತೆಯ ಹಿನ್ನೆಲೆಯಲ್ಲಿ ಸ್ಥಾಪಿಸಿದ್ದ ಚೆಕ್ ಪೋಸ್ಟ್ ಗಳ ಮೂಲಕ ಒಂದೇ ದಿನದಲ್ಲಿ ರೂ. 1.91ಲಕ್ಷ ದಂಡ ಸಂಗ್ರಹಿಸುವ ಮೂಲಕ ವಿಭಿನ್ನ ರೀತಿಯ ಸಾಧನೆ ಮಾಡಿದ್ದಾರೆ.
ಸಂಚಾರಿ ಪೊಲೀಸರು ಮಂಗಳೂರು ಚಲೋ ಬೈಕ್ ಜಾಥಾವನ್ನು ತಡೆಯುವ ಸಲುವಾಗಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಪುತ್ತೂರಿನ ಕೆಮ್ಮಾಯಿ, ಪರ್ಲಡ್ಕ, ಮುಕ್ವೆ ಮತ್ತು ಕಬಕದಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದ್ದರು. ಈ ವೇಳೆ ವಾಹನ ಸವಾರರು ಸಾರಿಗೆ ನಿಯಮಗಳನ್ನು ಉಲ್ಲಂಘಿಸುವ ಸ್ಪಷ್ಟ ಚಿತ್ರಣ ಪೊಲೀಸರಿಗೆ ಲಭಿಸಿದೆ.
ಈ ಚೆಕ್ ಪೋಸ್ಟ್ ಗಳ ಮೂಲಕ ಸಂಚಾರಿ ಪೊಲೀಸರು ರೂ. 1,91,300 ದಂಡವನ್ನು ಸಂಗ್ರಹಿಸಿದ್ದಾರೆ. ಇವುಗಳ ಪೈಕಿ ಅತೀಹೆಚ್ಚು ಅಂದರೆ 579 ಪ್ರಕರಣಗಳ ಮೂಲಕ ರೂ. 1,29,100 ದಂಡವನ್ನು ಕೆಮ್ಮಾಯಿ ಚೆಕ್ ಪೋಸ್ಟ್ ವೊಂದರಿಂದಲೇ ಸಂಗ್ರಹಿಸಲಾಗಿದೆ.
ಉಳಿದಂತೆ ಉಪನಿರೀಕ್ಷಕ ಜಗದೀಶ್ ರೆಡ್ಡಿ ನೇತೃತ್ವದಲ್ಲಿ ಕಬಕದಲ್ಲಿ 205 ಪ್ರಕರಣಗಳಿಂದ ರೂ. 35,100, ಉಪನಿರೀಕ್ಷಕ ವೆಂಕಟೇಶ್ ಭಟ್ ನೇತೃತ್ವದಲ್ಲಿ ಪರ್ಲಡ್ಕದಲ್ಲಿ ರೂ. 15,100 ದಂಡ ಸಂಗ್ರಹವಾಗಿದ್ದರೆ 92 ಪ್ರಕರಣಗಳು ದಾಖಲಾಗಿವೆ ಮತ್ತು ಮುಕ್ವೆಯಲ್ಲಿ ಅಧಿಕಾರಿ ರತನ್ ಕುಮಾರ್ ಅವರ ನೇತೃತ್ವದಲ್ಲಿ 69 ಪ್ರಕರಣಗಳಿಂದ ರೂ. 12,000 ದಂಡ ಸಂಗ್ರಹವಾಗಿದೆ.
ವಾಹನ ಸವಾರರು ಸಾರಿಗೆ ನಿಯಮಗಳನ್ನು ಮುಲಾಜಿಲ್ಲದೆ ಗಾಳಿಗೆ ತೂರಿರುವುದು ಈ ವೇಳೆ ಸ್ಪಷ್ಟವಾಗಿದೆ. ದಾಖಲಾದ ಪ್ರಕರಣಗಳ ಪೈಕಿ 422 ಪ್ರಕರಣಗಳು ಹೆಲ್ಮೆಟ್ ರಹಿತ ವಾಹನ ಚಲಾವಣೆಯದ್ದಾದರೆ, ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿದ 99 ಪ್ರಕರಣಗಳು, ಪರವಾನಿಗೆ ರಹಿತ ವಾಹನ ಚಾಲನೆಯ 72 ಪ್ರಕರಣಗಳು, 16 ಸೀಟ್ ಬೆಲ್ಟ್ ರಹಿತ ವಾಹನ ಚಾಲನೆ ಪ್ರಕರಣಗಳು, 48 ಇಂಶುರೆನ್ಸ್ ರಹಿತ ವಾಹನ ಚಾಲನೆ, ಸಮವಸ್ತ್ರಯಿಲ್ಲದೆ ವಾಹನ ಚಲಾಯಿಸಿದ 69 ಪ್ರಕರಣಗಳು ಮತ್ತು ಇತರ 219 ಪ್ರಕರಣಗಳು ದಾಖಲಾಗಿವೆ.