ಕುಂದಾಪುರ, ಅ.11(DaijiworldNews/AA): ಕಲಾಕ್ಷೇತ್ರದ ಸಾರಥ್ಯದಲ್ಲಿ ಗುರುವಾರ ಸಂಜೆ ಕುಂದಾಪುರ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಕುಂದಾಪುರ ಹುಲಿ ಕುಣಿತ ನಡೆಯಿತು.
ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಪರಂಪರೆಯ ಕುಂದಾಪುರ ಹುಲಿ ಕುಣಿತ ನಡೆಯಿತು. ರಾಜೀವ ಕೋಟ್ಯಾನ್ ಹುಲಿವೇಷದ ಗೊಂಡೆಗೆ ಪಟ್ಟಿ ಕಟ್ಟುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಆಶಯವವನ್ನು ವಿವರಿಸಿದ ಕಲಾಕ್ಷೇತ್ರದ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ಮಂಗಳೂರು, ಉಡುಪಿ ಹುಲಿವೇಷದಂತೆ ಕುಂದಾಪುರದ ಹುಲಿವೇಷಕ್ಕೇ ವಿಶೇಷ ಮಹತ್ವವಿದೆ. ತನ್ನದೆಯಾದ ಧಾರ್ಮಿಕ ಹಿನ್ನೆಲೆಯಿದೆ. ಬೇರೆ ಬೇರ ಭಾಗದ ಹುಲಿವೇಷಗಳಿಗೆ ಹುಲಿವೇಷ ಕುಣಿತಕ್ಕೆ ಹೋಲಿಸಿದರೆ ಕುಂದಾಪುರ ಹುಲಿವೇಷದ ಪರಂಪರೆ, ವೈವಿಧ್ಯತೆ, ಪೂರ್ವ ಹಿನ್ನೆಲೆ, ಧಾರ್ಮಿಕ ಕಟ್ಟುಪಾಡುಗಳು ವಿಶೇಷವಾದುದು. ಆದರೆ ಇವತ್ತಿನ ಕಾಲಘಟ್ಟದಲ್ಲಿ ಪ್ರೋತ್ಸಾಹದ ಕೊರತೆಯಿಂದ ಕುಂದಾಪುರ ಹುಲಿವೇಷ ಕುಣಿತ ಅವನತಿಯ ಅಂಚನ್ನು ತಲುಪಿದೆ. ಇಂಥಹ ಅಪರೂಪದ ಕುಂದಾಪುರ ಹುಲಿ ಕುಣಿತವನ್ನು ಉಳಿಸಿ, ಮುಂದಿನ ಪೀಳಿಗೆಗೆ ದಾಟಿಸುವ ಸಂಕಲ್ಪವನ್ನು ಕಲಾಕ್ಷೇತ್ರ ಮಾಡಿದೆ. ಕಲಾಕ್ಷೇತ್ರ ಆರಂಭದ ದಿನಗಳಿಂದಲೂ ಕೂಡಾ ಕುಂದಾಪುರದ ಭಾಗದ ಸಂಸ್ಕೃತಿ, ಆಚಾರ, ವಿಚಾರ, ಕಲೆಗೆ ಉತ್ತೇಜನ ನೀಡುತ್ತಾ ಬಂದಿದೆ. ಈ ಪರಂಪರೆ ಉಳಿಯಬೇಕು. ಕಲೆಯನ್ನು ಉಳಿಸಬೇಕು. ಪ್ರತಿಯೊಬ್ಬರು ಪ್ರೀತಿ ಅಭಿಮಾನದಿಂದ ನಮ್ಮೂರ ಪರಂಪರೆಯನ್ನು ಉಳಿಸಿ ಬೆಳೆಸೋಣ ಎಂದರು.
ಈ ಸಂದರ್ಭದಲ್ಲಿ ಹುಲಿವೇಷ ಕುಣಿತದ ಹಿನ್ನೆಲೆ ವಾದಕರಾದ ಡಾ.ಮಂಜನಾಥ ದೇವಾಡಿಗ, ಸುರೇಶ, ಪ್ರತಾಪ್, ರಾಜೇಶ್, ಮಂಜುನಾಥ ದೇವಾಡಿಗ, ಸುಬ್ರಹ್ಮಣ್ಯ ಹಾಗು ಹುಲಿವೇಷಧಾರಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗೀತಗಾಯನ ಸಂಸ್ಥೆಯ ಸನತ್ ಕುಮಾರ್ ರೈ, ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜೋನ್ಸನ್ ಡಿ ಅಲ್ಮೇಡಾ, ಗಿರೀಶ್ ಜಿ.ಕೆ, ಮಹೇಶ ಪೂಜಾರಿ, ಮೋಹನ ಸಾರಂಗ, ದಾಮೋದರ ಪೈ, ಜೋಯ್ ಕರ್ವೆಲ್ಲೊ, ಸಾಯಿನಾಥ ಶೇಟ್, ಪ್ರವೀಣ ಕುಮಾರ್, ತ್ರಿವಿಕ್ರಮ ಪೈ ಮೊದಲಾದವರು ಉಪಸ್ಥಿತರಿದ್ದರು.
ರಾಮಚಂದ್ರ ಮತ್ತು ರಾಜೇಶ ಕಾವೇರಿ ಕಾರ್ಯಕ್ರಮ ನಿರ್ವಹಿಸಿದರು, ಬಳಿಕ ಪರಂಪರೆಯ ಹುಲಿ ಕುಣಿತದ ಜೊತೆಯಲ್ಲಿ ಬೇರೆ ಬೇರೆ ಹುಲಿ ವೇಷ ತಂಡಗಳ ಪ್ರದರ್ಶನ ನಡೆಯಿತು.