ಸುಳ್ಯ, ಅ.11(DaijiworldNews/AA): ಸಂಪಾಜೆಯ ಎರಡು ಮನೆಗಳಲ್ಲಿ ಚಿನ್ನಾಭರಣ ಮತ್ತು ಹಣ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು ಆರೋಪಿಗಳಿಬ್ಬರ ಆರೋಪ ಸಾಬೀತಾದ ಹಿನ್ನೆಲೆ ಇಬ್ಬರಿಗೂ ಸುಳ್ಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ಅಹ್ಮದ್ ಕಬೀರ್ ಹಾಗೂ ಸಾಜುದೀನ್ ಫಾರೂಖ್ ಶಿಕ್ಷೆಗೆ ಒಳಗಾದ ಆರೋಪಿಗಳು.
ಪ್ರಕರಣದ ವಿವರ:
2014ರ ಜ. 29ರಂದು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಪೆಲತ್ತಡ್ಕ ಸನತ್.ಪಿ.ಎಸ್. ಅವರ ಮನೆಯ ಹಿಂಬದಿಯಲ್ಲಿರುವ ಬಾಗಿಲನ್ನು ಮುರಿದು ಕಳ್ಳರು ಒಳಪ್ರವೇಶಿಸಿದ್ದರು. ಬಳಿಕ ಕಪಾಟಿನಲ್ಲಿರಿಸಿದ್ದ ಸುಮಾರು 62,900 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು 10,000 ರೂ. ಕಳವು ಮಾಡಿದ್ದರು. ಇನ್ನು ಅದೇ ದಿನದಂದು ಸಂಪಾಜೆ ಗ್ರಾಮದ ಗೂನಡ್ಕದಲ್ಲಿನ ಮಾಧವ ಪಿ. ಅವರ ಮನೆಯ ಹಿಂಬದಿಯಲ್ಲಿರುವ ಕಿಟಕಿಯ ಕಬ್ಬಿಣದ ರಾಡನ್ನು ಬಗ್ಗಿಸಿ ಮನೆಯೊಳಗೆ ಪ್ರವೇಶಿಸಿದ್ದ ಕಳ್ಳರು ಸುಮಾರು 2,27,600 ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಎರಡೂ ಪ್ರಕರಣಗಳಲ್ಲಿ 2ನೇ ಆರೋಪಿ ತಲೆಮರೆಸಿಕೊಂಡಿದ್ದರಿಂದ ಎರಡೂ ಪ್ರಕರಣವನ್ನು ವಿಭಜಿಸಿ ಬಳಿಕ ಆರೋಪಿ ಪತ್ತೆಯಾದ ನಂತರ ಎಲ್ಲ 4 ಪ್ರಕರಣಗಳನ್ನು ಸುಳ್ಯ ನ್ಯಾಯಾಲಯ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಈ ಇಬ್ಬರೂ ಆರೋಪಿಗಳು ಮಾಡಿರುವ ಅಪರಾಧ ಸಾಬೀತಾಗಿದ್ದು, ದೋಷಿ ಎಂದು ಪರಿಗಣಿಸಲಾಗಿದೆ. ಅವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.