ಕಾಸರಗೋಡು,ಅ.07(DaijiworldNews/AK): ನಾಲ್ಕು ದಿನಗಳ ಹಿಂದೆ ತಾನು ಓಡಿಸುತ್ತಿದ್ದ ಆಟೋರಿಕ್ಷಾವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಹಿನ್ನಲೆಯಲ್ಲಿ ಮನ ನೊಂದು ಚಾಲಕ ವಾಸ ಸ್ಥಳದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ನಗರದಲ್ಲಿ ನಡೆದಿದೆ.
ಕರ್ನಾಟಕ ಮೂಲದ ಅಬ್ದುಲ್ ಸತ್ತಾರ್ ( 55) ಮೃತಪಟ್ಟವರು ಕಾಸರಗೋಡು ರೈಲ್ವೆ ನಿಲ್ದಾಣ ರಸ್ತೆಯ ಬಾಡಿಗೆ ಕ್ವಾಟರ್ಸ್ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದ್ದಾರೆ .
ಮೂರು ವರ್ಷಗಳಿಂದ ಕ್ವಾಟರ್ಸ್ ನಲ್ಲಿ ವಾಸ್ತವ್ಯ ಹೂಡಿ ನಗರದಲ್ಲಿ ಆಟೋರಿಕ್ಷಾ ಬಾಡಿಗೆ ನಡೆಸುತ್ತಿದ್ದರು. ನಾಲ್ಕು ದಿನಗಳ ಹಿಂದೆ ಸಂಜೆ ನಗರದ ಗೀತಾ ಜಂಕ್ಷನ್ ಬಳಿ ಅಬ್ದುಲ್ ಸತ್ತಾರ್ ರವರ ಆಟೋರಿಕ್ಷಾ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ನಿಲುಗಡೆ ಗೊಳಿಸಲಾಗಿದೆ ಎಂದು ಆರೋಪಿಸಿ ನೋಟಿಸ್ ನೀಡಿ ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಸಾಲ ಪಡೆದು ಆಟೋರಿಕ್ಷಾ ಖರೀದಿಸಿದ್ದು , ಬಿಟ್ಟುಕೊಡುವಂತೆ ಹಲವು ಬಾರಿ ಠಾಣೆಗೆ ತೆರಳಿ ಪೊಲೀಸರಲ್ಲಿ ಮನವಿ ಮಾಡಿದರೂ ಪೊಲೀಸರು ಬಿಟ್ಟುಕೊಡಲು ಮುಂದಾಗಲಿಲ್ಲ ಎನ್ನಲಾಗಿದೆ. ಬಳಿಕ ಉಳಿದ ಆಟೋ ರಿಕ್ಷಾ ಚಾಲಕರು ಕಾಸರಗೋಡು ಡಿ ವೈ ಎಸ್ಪಿ ಕಚೇರಿಗೆ ತೆರಳಿ ಮನವಿ ಮಾಡಿದ್ದು , ಭರವಸೆ ನೀಡಿದ್ದರೂ ನಗರ ಠಾಣಾ ಪೊಲೀಸರು ಹಲವು ಕಾರಣ ನೀಡಿ ಆಟೋ ರಿಕ್ಷಾ ಬಿಟ್ಟು ಕೊಡಲು ಮುಂದಾಗಲಿಲ್ಲ ಎಂದು ಆರೋಪ ಕೇಳಿ ಬರುತ್ತಿದೆ. ಈ ನಡುವೆ ಸೋಮವಾರ ಸಂಜೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಘಟನೆ ಬಳಿಕ ನಗರದಲ್ಲಿ ಆಟೋ ಚಾಲಕರು ಸಂಚಾರ ಸ್ಥಗಿತ ಗೊಳಿಸಿ ಮುಷ್ಕರ ನಡೆಸಿದರು. ಆಟೋ ಚಾಲಕರು ನಗರ ಠಾಣೆಗೆ ಮುತ್ತಿಗೆ ಹಾಕಿದರು.
ಸಬ್ ಇನ್ಸ್ ಪೆಕ್ಟರ್ ಪಿ . ಅನೂಪ್ ವರ್ಗಾವಣೆ
ಇನ್ನು ಆಟೋರಿಕ್ಷಾ ಚಾಲಕ ಅಬ್ದುಲ್ ಸತ್ತಾರ್ ನ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಆರೋಪಕ್ಕೆ ಸಿಲುಕಿರುವ ಕಾಸರಗೋಡು ನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ಪಿ . ಅನೂಪ್ ರನ್ನು ಚಂದೇರ ಪೊಲೀಸ್ ಠಾಣೆ ಗೆ ವರ್ಗಾಹಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ ರವರು ಅನೂಪ್ ರವರನ್ನು ಕಚೇರಿಗೆ ಕರೆಸಿ ವರ್ಗಾವಣೆ ಆದೇಶವನ್ನು ನೀಡಿದ್ದಾರೆ ಅನೂಪ್ ರವರ ವಿರುದ್ದ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.