ಮಂಗಳೂರು, ಅ.07(DaijiworldNews/AA): ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ನೈಜಿರಿಯಾ ಪ್ರಜೆಯಿಂದ ಮಂಗಳೂರು ಸಿಸಿಬಿ ಕಾರ್ಯಾಚರಣೆ ನಡೆಸಿ 6 ಕೋಟಿ ಮೌಲ್ಯದ 6.310 ಕೆಜಿ ಎಂಡಿಎಂಎ ವಶಕ್ಕೆ ಪಡೆದಿದ್ದರು. ಈ ಪ್ರಕರಣವನ್ನು ಭೇದಿಸಿದ ಸಿಸಿಬಿ ತಂಡಕ್ಕೆ ಡಿಜಿ ಐಜಿ ಒಂದು ಲಕ್ಷ ಬಹುಮಾನ ಹಾಗೂ ಕಮಿಷನರ್ ಒಂದು ಲಕ್ಷ ಬಹುಮಾನ ಘೋಷಣೆ ಮಾಡಿದ್ದಾರೆ. ಈ ಮೂಲಕ ಸಿಸಿಬಿ ತಂಡಕ್ಕೆ ಒಟ್ಟು ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.
ಈ ಬಗ್ಗೆ ಮಾಧ್ಯಮದವರೊಮದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಅವರು, ಮೊದಲ ಬಾರಿಗೆ 6 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಮಂಗಳೂರು ಪಶ್ಚಿಮ ಠಾಣೆಯಲ್ಲಿ ಹೈದಾರಾಲಿ ಬಂಧಿಸಿ 15 ಗ್ರಾಂ ವಶಕ್ಕೆ ಪಡೆಯಲಾಗಿದೆ. ಈತನ ತನಿಖೆಯಿಂದ ಮೂಲ ಪತ್ತೆ ಆಗಿದ್ದು, ಇದ್ರಲ್ಲಿ ಆತನ ಸಹಯೋಗಿಗಳು ಪತ್ತೆಯಾಗಿದ್ದಾರೆ. ಅವರ ಬ್ಯಾಂಕ್ ಡಿಟೇಲ್ಸ್ ಮೂಲಕ ಆರೋಪಿ ಪತ್ತೆ ಮಾಡಲಾಗಿದೆ.
ಇನ್ನು ಆರೋಪಿ ನೈಜಿರಿಯಾ ಮೂಲದ ವ್ಯಕ್ತಿ ಕಳೆದ ಹಲವು ವರ್ಷದಿಂದ ಮಂಗಳೂರಿನಲ್ಲಿ ಇದ್ದಾನೆ. 35 ಡೆಬಿಟ್ ಕಾರ್ಡ್, 17 ಇನ್ ಆಕ್ಟಿವ್ ಸಿಮ್, ಬ್ಯಾಂಕ್ ಪಾಸ್ಬುಕ್ ವಶಕ್ಕೆ ಪಡೆಯಲಾಗಿದೆ. ಇನ್ನೂ ಅನೇಕ ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಎಲ್ಲರನ್ನೂ ಬಂಧಿಸುತ್ತೇವೆ. 50, 60, 100 ಗ್ರಾಂ ಪ್ಯಾಕೇಜ್ ಮಾಡಿ ಇಡಲಾಗಿತ್ತು. ಈ ದಾಳಿ ತಡವಾಗಿದ್ರೆ ಮಂಗಳೂರಿಗೆ ಬರ್ತಾ ಇತ್ತು. ಡ್ರಗ್ ಕಸದ ಪ್ಯಾಕೆಟ್, ಲೇಸ್, ಬಿಸ್ಕೆಟ್, ಪ್ಲಾಸ್ಟಿಕ್ ಮೂಲಕ ಗ್ರಾಹಕರಿಗೆ ವಿತರಿಸಲಾಗುತ್ತಿತ್ತು. ನೈಜಿರಿಯಾ ಪ್ರಜೆಯ ವಿಸಾ ಅವಧಿ ಎರಡು ವರ್ಷಗಳ ಹಿಂದೆ ಮುಕ್ತಾಯವಾಗಿರುತ್ತದೆ. ಹೆಚ್ಚು ವಿದ್ಯಾರ್ಥಿಗಳು ಈ ತಂಡದ ಟಾರ್ಗೆಟ್ ಮತ್ತು ಗಿರಾಕಿ ಎಂಬ ಮಾಹಿತಿ ಲಭ್ಯವಾಗಿದೆ. ನೈಜಿರಿಯಾ ಪ್ರಜೆಯ ಕುಟುಂಬ ಮಂಗಳೂರಿನಲ್ಲಿ ವಾಸವಾಗಿದೆ ಎಂದು ಮಾಹಿತಿ ನೀಡಿದರು.
ಪ್ರಕರಣದ ವಿವರ:
"ಡ್ರಗ್ಸ್ ಫ್ರಿ ಮಂಗಳೂರು" ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರಕ್ಕೆ ಹಾಗೂ ಇತರ ರಾಜ್ಯಗಳಿಗೆ ಎಂಡಿಎಂಎ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ನೈಜಿರಿಯಾ ದೇಶದ ವಿದೇಶಿ ಪ್ರಜೆಯೋರ್ವನನ್ನು ದಸ್ತಗಿರಿ ಮಾಡಿ ರೂ. 6 ಕೋಟಿ ಮೌಲ್ಯದ 6.310 ಕೆಜಿ ಎಂಡಿಎಂಎ ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಸೆಪ್ಟೆಂಬರ್ 9ರಂದು ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪಂಪ್ ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಮಾದಕ ವಸ್ತುವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ದಾಳಿ ನಡೆಸಿ ಮಾದಕ ವಸ್ತುವನ್ನು ಹೊಂದಿದ್ದ ತೊಕ್ಕೊಟ್ಟು ಪೆರ್ಮನೂರಿನ ಚೆಂಬುಗುಡ್ಡೆ ಹೌಸ್ ನಿವಾಸಿ ಹೈದರ್ ಅಲಿಯಾಸ್ ಹೈದರ್ ಆಲಿ(51) ಎಂಬಾತನನ್ನು ದಸ್ತಗಿರಿ ಮಾಡಿ ಆತನ ವಶದಿಂದ ರೂ. 75,000/- ಮೌಲ್ಯದ 15 ಗ್ರಾಂ ಮಾದಕ ವಸ್ತು ಎಂಡಿಎಂಎನ್ನು ಸ್ವಾಧೀನಪಡಿಸಿಕೊಂಡು ಆತನ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ಸಿಸಿಬಿ ಘಟಕಕ್ಕೆ ಹಸ್ತಾಂತರಿಸಲಾಗಿತ್ತು.
ಈ ಪ್ರಕರಣ ದಲ್ಲಿ ಮಾದಕ ವಸ್ತುವನ್ನು ಪೂರೈಕೆ ಮಾಡುವ ಡ್ರಗ್ಸ್ ಪೆಡ್ಲರ್ ಗಳನ್ನು ಪತ್ತೆ ಹಚ್ಚುವ ಸಲುವಾಗಿ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆಯನ್ನು ಮುಂದುವರಿಸಿ ತನಿಖೆಯನ್ನು ಕೈಗೊಂಡ ಸಮಯ ಆರೋಪಿ ಹೈದರ್ಗೆ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇನ್ನಿತರ ಡ್ರಗ್ ಪೆಡ್ಲರ್ ಗಳ ಮಾಹಿತಿ ಸಂಗ್ರಹಿಸಿ ಚಾಕಚಾಕ್ಯತೆಯಿಂದ, ತಾಂತ್ರಿಕ ಸಹಾಯದಿಂದ ಹಾಗೂ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಮಾದಕ ವಸ್ತುವನ್ನು ಪೂರೈಕೆ ಮಾಡುವ ವ್ಯಕ್ತಿಯು ಬೆಂಗಳೂರಿನಲ್ಲಿ ವಾಸ್ತವ್ಯವಿರುವ ನೈಜೇರಿಯಾ ದೇಶದ ವಿದೇಶಿ ಪ್ರಜೆ ಎಂದು ತಿಳಿದುಬಂದಂತೆ ಬೆಂಗಳೂರು ನಗರದ ದೊಮ್ಮ ಸಂದ್ರ ಗ್ರಾಮ ಸ್ವಾಮಿ ವಿವೇಕಾನಂದ ನಗರದ ಸಾಯಿಮಿಡೋ ಪೇಸ್ -2 ಗೋವಿಂದ ರೆಡ್ಡಿ ಲೇ ಔಟ್ ನ ಬಾಡಿಗೆ ಮನೆಗೆ ದಾಳಿ ನಡೆಸಿ ಮಾದಕ ವಸ್ತುವನ್ನು ಹೊಂದಿದ್ದ ಪೀಟರ್ ಅಕೆಡಿ ಬೆಲನೋವು(38) ಎಂಬಾತನನ್ನು ಪತ್ತೆ ಹಚ್ಚಿ ಆತನ ಮನೆಯಲ್ಲಿ ದಾಸ್ತಾನು ಇರಿಸಿದ್ದ ಒಟ್ಟು 6 ಕೋಟಿ ಮೌಲ್ಯದ 6.310 ಕೆಜಿ ಎಂಡಿಎಂಎ, 3 ಮೊಬೈಲ್ ಫೋನುಗಳು, ಡಿಜಿಟಲ್ ತೂಕ ಮಾಪಕ, ಒಟ್ಟು 35 ಎಟಿಎಂ/ಡೆಬಿಟ್ ಕಾರ್ಡ್ ಗಳು, 17 ಇನ್ ಅಕ್ಟಿವ್ ಸಿಮ್ ಕಾರ್ಡ್ ಗಳು, 10 ವಿವಿಧ ಬ್ಯಾಂಕ್ ಗಳ ಬ್ಯಾಂಕ್ ಖಾತೆ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ.. 6,00,63,500/-ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಆರೋಪಿ ಪೀಟರ್ ಅಕೆಡಿ ಬೆಲನೋವು ಎಂಬಾತನ ವಿರುದ್ಧ ಈ ಹಿಂದೆ ಬೆಂಗಳೂರಿನ ವಿದ್ಯಾರಣ್ಯಾಪುರ ಪೊಲೀಸ್ ಠಾಣೆಯಲ್ಲಿ 2023ರಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ. ಈತನು ಬೆಂಗಳೂರು ನಗರ ಹಾಗೂ ರಾಜ್ಯದ ವಿವಿಧ ಕಡೆಗಳಿಗೆ ಅಲ್ಲದೇ ಕೇರಳ ರಾಜ್ಯಕ್ಕೆ ಕೂಡಾ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿದ್ದನು. ಈ ಮಾದಕ ವಸ್ತು ದಂಧೆ ಪ್ರಕರಣದಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಈ ನಿಟ್ಟಿನಲ್ಲಿ ಪತ್ತೆ ಕಾರ್ಯ ಮುಂದುವರಿಯುವುದು.
ಈ ಮಾದಕ ವಸ್ತು ಎಂಡಿಎಂಎ ಮಾರಾಟ/ಸಾಗಾಟದ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್ ರವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರಾದ ಸಿದ್ದಾರ್ಥ ಗೋಯಲ್, ಉಪ ಪೊಲೀಸ್ ಆಯುಕ್ತರಾದ ಬಿ ಪಿ ದಿನೇಶ್ ಕುಮಾರ್ ನಿರ್ದೇಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐಯವರಾದ ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್ಐ ಯವರಾದ ಮೋಹನ್ ಕೆ ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿಯವರು ಪಾಲ್ಗೊಂಡಿದ್ದರು.