ಮಂಗಳೂರು, ಅ.07(DaijiworldNews/AA): ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಆಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳು ದೇಶ ಬಿಟ್ಟು ಹೋಗದಂತೆ ಎಲ್ಓಸಿ ಜಾರಿ ಮಾಡಿದ್ದೇವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ಮಾತನಾಡಿದ ಅವರು, ನಿನ್ನೆ ಬೆಳಿಗ್ಗೆ ಕೂಳೂರು ಸೇತುವೆಯಿಂದ ಮಾಜಿ ಶಾಸಕರ ಸಹೋದರ ಮುಮ್ತಾಜ್ ಆಲಿ ನದಿಗೆ ಹಾರಿದ್ದರು. ಅವರು ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿನ್ನೆ ಇಡೀ ದಿನ ಕಾರ್ಯಾಚರಣೆ ನಡೆಸಿದ್ರೂ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ 10:30ಕ್ಕೆ ಅವರ ಮೃತದೇಹ ಪತ್ತೆಯಾಗಿದೆ ಎಂದರು.
ಮುಮ್ತಾಜ್ ಆಲಿ ಅವರ ಕುಟುಂಬಸ್ಥರು ಕಾವೂರು ಠಾಣೆಗೆ ಬ್ಲಾಕ್ ಮೇಲ್ ಬಗ್ಗೆ ದೂರು ಕೊಟ್ಟಿದ್ದರು. ಹನಿಟ್ರ್ಯಾಪ್ ರೀತಿಯಲ್ಲಿ ಆರು ಜನರ ಮೇಲೆ ಅವರು ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಮಹಿಳೆ ಜೊತೆಗಿನ ಸೆಕ್ಸ್ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಎಂದು ದೂರು ಬಂದಿದೆ ಎಂದು ಅವರು ಹೇಳಿದರು.
ಮುಮ್ತಾಜ್ ಆಲಿ ಅವರು ಸಾಯುವ ಮುನ್ನ ಫ್ಯಾಮಿಲಿ ಗ್ರೂಪ್ ನಲ್ಲಿ ವಾಯ್ಸ್ ನೋಟ್ ಹಾಕಿದ್ದರು. 50 ಲಕ್ಷ ಹಣ ಕೊಟ್ಟಿದ್ದರು, ಉಳಿದ 25 ಲಕ್ಚ ಚೆಕ್ ಮೂಲಕ ಕೊಟ್ಟಿದ್ದರು. ವಾಯ್ಸ್ ಕ್ಲಿಪ್ಪಿಂಗ್ ನಲ್ಲಿ ಕೆಲವರ ಹೆಸರು ಉಲ್ಲೇಖ ಮಾಡಿದ್ದಾರೆ. ಆರೋಪಿ ಸತ್ತಾರ್ ಹೆಸರು ವಾಯ್ಸ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ಆರೋಪಿ ಮಹಿಳೆ ರೆಹಮತ್ ಸಂಬಂಧಿ ಅಲ್ಲ, ಮುಂದಿನ ತನಿಖೆ ಮಾಡ್ತೀವಿ. ಇನ್ನು ಎಂಸಿಎಫ್ ರೈಲ್ವೆ ಗೇಟ್ ಬಳಿ ಅವರು ಖಾಸಗಿ ಬಸ್ ಗೆ ಢಿಕ್ಕಿ ಹೊಡೆದಿದ್ದಾರೆ. ಆ ಬಳಿಕ ಸೇತುವೆ ಬಳಿಗೆ ಬಂದು ನದಿಗೆ ಹಾರಿದ್ದಾರೆ ಎಂದು ಕಮಿಷನರ್ ತಿಳಿಸಿದರು.