ಬಂಟ್ವಾಳ,ಅ.07(DaijiworldNews/AK): ಆ ಬೊಂಬೆಗಳನ್ನು ನೋಡುತಲಿದ್ದರೆ ಎಂತವರೂ ಮೈಮರೆಯಲೇಬೇಕು..ಪೂರಕ ವಸ್ತ್ರಾಲಂಕಾರದೊಂದಿಗೆ ಬಣ್ಣಬಣ್ಣದ ವಿದ್ಯುದ್ದೀಪಗಳ ಬೆಳಕಿನಲ್ಲಿ ಅಂದವಾಗಿ ಜೋಡಿಸಿಟ್ಟಿರುವ ನೂರಾರು ಬೊಂಬೆಗಳು ಪುರಾಣದ ಕತೆಗಳ ಜೊತೆಗೆ, ವಾಸ್ತವ ಜಗತ್ತನ್ನೇ ತೆರೆದಿಟ್ಟಿದೆ.
ಹೌದು ಇದು.. ನವರಾತ್ರಿ ಸಂಭ್ರಮಕ್ಕೆಂದು ಬಿ.ಸಿ.ರೋಡಿನಲ್ಲಿ ಮೈಸೂರು ಮೂಲದ ದಂಪತಿ ಸೃಷ್ಟಿಸಿರುವ ಅಪರೂಪದ "ಬೊಂಬೆಲೋಕ".ಕೆ.ಎನ್.ಆರ್. ಕನ್ಸ್ ಸ್ಟ್ರಕ್ಷನ್ ಕಂಪನಿಯಲ್ಲಿ ಪಿ.ಆರ್.ಒ. ಆಗಿರುವ ನಂದಕುಮಾರ್ ಹಾಗೂ ಅವರ ಪತ್ನಿ ಪುಷ್ಪಾ ನಂದಕುಮಾರ್ ರವರೇ ಈ ಬೊಂಬೆಲೋಕದ ಸೃಷ್ಟಿದಾತರು.ಕಳೆದ ಹದಿನಾರು ವರ್ಷಗಳಿಂದ ಪ್ರತೀ ವರ್ಷವೂ ಬೊಂಬೆಗಳ ಆರಾಧನೆಯ ಕಾರ್ಯವನ್ನು ಚಾಚೂ ತಪ್ಪದೇ ಮಾಡುತ್ತಿರುವ ಈ ದಂಪತಿ ಈ ಬಾರಿ 17 ನೇ ವರ್ಷಕ್ಕೆ ಮತ್ತಷ್ಟು ಹೊಸತನಗಳನ್ನು ತುಂಬಿಕೊಟ್ಟಿದ್ದಾರೆ.
ವೃತ್ತಿ ಸಹಜ ವರ್ಗಾವಣೆ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿರುವ ಇವರು ಆರಂಭದಲ್ಲಿ . ಎರಡು ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ಇದ್ದವರು ಪ್ರಸ್ತುತ ಬಿ.ಸಿ.ರೋಡ್ ನ ಕಿಂಗ್ಸ್ ಕೋರ್ಟ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದು, ನಂದಕುಮಾರ್ ದಂಪತಿಯ ಬೊಂಬೆ ಗಳ ಸಂಗ್ರಹ ವಿಸ್ಮಯಕಾರಿಯಾಗಿದೆ.
ಬಣ್ಣಬಣ್ಣದ ವಿದ್ಯುದ್ದೀಪಗಳಅಲಂಕಾರದಲ್ಲಿ ಜೋಡಿಸಿಟ್ಟಿರುವ ದೇವದೇವತೆಯರ ದೃಶ್ಯವೈಭವ, ಮೈಸೂರು ದಸರಾ ಮೆರವಣಿಗೆ, ಹೆಣ್ಣುಮಗುವಿನ ಜೀವಿತಾವಧಿಯ ಹಂತಗಳು ಹೀಗೆ ಮೂರು ವಿಭಾಗದಲ್ಲಿ ಕಲಾತ್ಮಕವಾಗಿ ಜೋಡಿಸಡಲಾಗಿದೆ.
ಕತೆ ಹೇಳುವ ಬೊಂಬೆಗಳು...
ಜೋಡಿಸಿಟ್ಟ ಬೊಂಬೆಗಳ ಪುಷ್ಪಾ ನಂದಕುಮಾರ್ ಅವರು, ಮನದಟ್ಟಾಗುವ ಹಾಗೆ ವಿವರ ನೀಡುತ್ತಾರೆ.ತಮ್ಮ ಮನೆ ದೇವರು ಕೃಷ್ಣ, ವಿಘ್ನ ನಿವಾರಕ ಗಣಪತಿ, ವಿಷ್ಣುವಿನ ಹತ್ತು ಅವತಾರಗಳು, ಸಪ್ತಮಾತೃಕೆಯರು, ರಾಮ, ಲಕ್ಷ್ಮಣ, ಸೀತೆ, ಆಂಜನೇಯ ಬೊಂಬೆಗಳು, ರಾಮನ ಪಟ್ಟಾಭಿಷೇಕ ಕಾರ್ಯಕ್ರಮದ ಸೀನ್, ನೃತ್ಯಗಾತಿಯರ ಬೊಂಬೆಗಳು, ವೆಂಕಟರಮಣ, ಶ್ರೀದೇವಿ, ಭೂದೇವಿ, ಅಷ್ಟಲಕ್ಷ್ಮೀಯರು, ವಿಷ್ಣುವಿನ ಹತ್ತು ಅವತಾರಗಳು, ಗೌರಿ, ನವದುರ್ಗೆಯರ ಬೊಂಬೆಗಳು ಇಲ್ಲಿವೆ.
ಪ್ರತಿದಿನ ನವದುರ್ಗೆಯ ಅವತಾರಗಳನ್ನು ಇಡಲಾಗುತ್ತದೆ. ಮಹಿಷಾಸುರನ ಬೊಂಬೆಯೂ ಇದೆ, ಚಾಮುಂಡಿ ಮಹಿಷನನ್ನು ಕೊಲ್ಲುವ ದೃಶ್ಯವೂ ಕಾಣಸಿಗುತ್ತದೆ. ಪಟ್ಟದ ಬೊಂಬೆ ಎಂದು ಹೇಳಲಾಗುವ ರಕ್ತ ಚಂದನ ಮರದ ಬೊಂಬೆಗಳನ್ನು ಸಂಪ್ರದಾಯದ ಪ್ರಕಾರ ಇಡಲಾಗಿದೆ. ಅದರ ಅಕ್ಕಪಕ್ಕ ಲಕ್ಷ್ಮೀ ಸರಸ್ವತಿ ಬೊಂಬೆಗಳು ಇವೆ. ಇದರಲ್ಲಿ ಹಿಂದಿನ ಕಾಲದ ಮದುವೆ ಸಂಪ್ರದಾಯ, ತೊಟ್ಟಿಲು ಇರುವ ದೃಶ್ಯಗಳಿವೆ. ಶ್ರೀಕೃಷ್ಣ ವಿವಿಧ ಭಕ್ಷ್ಯಭೋಜನಗಳನ್ನು ಹಾಕಿಕೊಂಡು ಊಟ ಮಾಡುವ ದೃಶ್ಯಗಳು ಇಲ್ಲಿವೆ. ಅಲ್ಲದೆ, ಸಂಗೀತಗಾರರು, ವಾದ್ಯಗೋಷ್ಠಿ ಇಲ್ಲಿದೆ.
ಸಾಂಪ್ರದಾಯಿಕ ಬೊಂಬೆಗಳ ಜೊತೆಯಲ್ಲಿ ಹೆಣ್ಣುಮಗಳು ಜೀವಿತಾವಧಿಯಲ್ಲಿ ಸಂಭ್ರಮಿಸುವ ವಿವಿಧ ಮಜಲುಗಳನ್ನು ತೊಟ್ಟಿಲಿನಿಂದ ತೊಟ್ಟಿಲವರೆಗೆ ಎನ್ನುವ ವಿಶಿಷ್ಟ ಪರಿಕಲ್ಪನೆಯಲ್ಲಿ ಜೋಡಿಸಿಟ್ಟದ್ದು, ಈ ಬಾರಿಯ ಬೊಂಬೆಲೋಕಕ್ಕೆ ವಿಶೇಷ ಮೆರುಗು ತಂದಿದೆ.
ಜೊತೆಗೆ ಕೂಡು ಕುಟುಂಬದ ಭೋಜನದ ದೃಶ್ಯಾವಳಿಯಲ್ಲಿ ಕೌಟುಂಬಿಕ ವಾತಾವರಣದಲ್ಲಿ ಊಟ, ಅಡುಗೆಮನೆ, ಹಣ್ಣು, ತರಕಾರಿಗಳು, ಧವಸ ಧಾನ್ಯಗಳನ್ನು ಸಂಕೇತಿಸುವ ಬೊಂಬೆಗಳ ಚಿತ್ರಣ ಅಂದವಾಗಿ ಮೂಡಿಬಂದಿದ್ದು ಬೆರಗುಮೂಡಿಸುವಂತಿದೆ.ಮೈಸೂರು ದಸರಾ ಮೆರವಣಿಗೆ ನೋಡುವುದೇ ಕಣ್ಣಿಗೆ ಹಬ್ಬ. ಮೈಸೂರಿನವರಾದ ನಾವು ದಸರಾ ಸಂದರ್ಭ ಮನೆಯಲ್ಲೇ ಬೊಂಬೆಗಳನ್ನು ಇಟ್ಟು ಮನೆಯಲ್ಲೇ ನವರಾತ್ರಿ ಆಚರಿಸುತ್ತೇವೆ.
ಹೀಗಾಗಿ ಅದರ ದೃಶ್ಯವೈಭವವನ್ನು ಮೂಡಿಸಲಾಗಿದೆ. ಆನೆ, ಒಂಟೆ, ಕುದುರೆ ಸಾಲಿನೊಂದಿಗೆ ವಾಹನಗಳು. ಆನೆಮೇಲೆಮಹಾರಾಜರು, ಆನೆಯ ಮೇಲೆ ಅಂಬಾರಿಸಹಿತ ಮೈಸೂರಿನ ಸಯ್ಯಾಜಿರಾವ್ ಸರ್ಕಲ್ ನಲ್ಲಿ ಸಾಗುತ್ತಿರುವ ದಸರಾ ಮೆರವಣಿಗೆಯ ದೃಶ್ಯದ ಪ್ರತಿಕೃತಿ ನಾವು ನಿರ್ಮಿಸಿದ್ದೇವೆ ಎನ್ನುತ್ತಾರೆ ಪುಷ್ಪಾ.ಹತ್ತು ದಿನ ನವರಾತ್ರಿಯಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಬೊಂಬೆಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಬೊಂಬೆ ಪ್ರೇಮಿ ಪುಷ್ಪಾನಂದಕುಮಾರ್ ಹೇಳಿದರು.
ಕಾರ್ಯನಿಮಿತ್ತ ಹಲವಾರು ಪ್ರದೇಶಗಳಲ್ಲಿ ನಾವು ವಾಸಿಸುತ್ತಿದ್ದೇವೆ. ಆದರೆ ಸಂಪ್ರದಾಯವನ್ನು ಬಿಟ್ಟಿಲ್ಲ,, ಇದು ನಮಗೆ ಖುಷಿಕೊಟ್ಟಿದೆ ಎಂದು ನಂದಕುಮಾರ್ ತಿಳಿಸಿದರು.