ಮಂಗಳೂರು, ಅ.07(DaijiworldNews/AA): ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ ಉದ್ಯಮಿ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ 28 ಗಂಟೆಗಳ ಕಾರ್ಯಾಚರಣೆ ಬಳಿಕ ಮುಮ್ತಾಝ್ ಅಲಿ ಅವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.
ಮುಮ್ತಾಝ್ ಅಲಿ ಅವರ ಮೃತದೇಹವನ್ನು ಮುಳುಗು ತಜ್ಞರು ಹೊರತೆಗೆದಿದ್ದಾರೆ. ಇನ್ನು ಅವರ ಮೃತದೇಹ ಪತ್ತೆಯಾದ ಕೂಡಲೇ ಅದನ್ನು ನಗರದ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.
ಭಾನುವಾರ ಬೆಳಗ್ಗೆ ಉಡುಪಿ - ಮಂಗಳೂರಿನ ಕೂಳೂರು ಸೇತುವೆಯ ಮೇಲೆ ಮುಮ್ತಾಜ್ ಅವರ ಕಾರು ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೆ, ಕಾರಿನ ಮುಂಭಾಗದ ಬಲಬದಿ ಅಪಘಾತ ನಡೆದಿರುವ ಕುರುಹುಗಳು ಪತ್ತೆಯಾಗಿತ್ತು.
ಮುಮ್ತಾಜ್ ಅಲಿ ಅವರನ್ನು ನಿರಂತರವಾಗಿ ಬೆದರಿಸಿ, ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ಕಿತ್ತುಕೊಂಡು ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳ ವಿರುದ್ಧ ಈಗಾಗಲೇ ಕಾವೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (BNSS) 173ರ ಅಡಿ ಎಫ್ ಐ ಆರ್ ದಾಖಲಾಗಿದೆ.