ಗಂಗೊಳ್ಳಿ, ಅ.07(DaijiworldNews/AA): ಇಲ್ಲಿನ ಖಾರ್ವಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಗೆ ಅರ್ಪಿಸಿದ್ದ 21 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೂಜೆ ಮಾಡುವ ಅರ್ಚಕನೇ ಕಳವುಗೈದು, ವಿವಿಧೆಡೆ ಅಡವಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಎಲ್ಲ 256 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕಳವು ಪ್ರಕರಣವು ಸೆಪ್ಟೆಂಬರ್ 21ರಂದು ಬೆಳಕಿಗೆ ಬಂದಿದ್ದು, ಆ ಕೂಡಲೇ ಆರೋಪಿ, ದೇವಸ್ಥಾನದ ಅರ್ಚಕ ಶಿರಸಿ ತಾಲೂಕಿನ ಸಾಲಕಣಿ ಗ್ರಾಮದ ಮೂರೆಗಾರ ಎಂಬಲ್ಲಿನ ನರಸಿಂಹ ಭಟ್ (43) ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಇದೀಗ ಗಂಗೊಳ್ಳಿ ಠಾಣಾ ಎಸ್ಐಗಳಾದ ಹರೀಶ್ ಆರ್., ಬಸವರಾಜ ಕನಶೆಟ್ಟಿ, ಸಿಬ್ಬಂದಿ ನಾಗರಾಜ, ಶಾಂತರಾಮ ಶೆಟ್ಟಿ, ರಾಘವೇಂದ್ರ, ಸಂದೀಪ ಕುರಣಿ ಹಾಗೂ ಚಾಲಕ ದಿನೇಶ ಅವರ ತಂಡವು ವಿಚಾರಣೆ ನಡೆಸಿ, ಆರೋಪಿಯು ಅಡವಿಟ್ಟಿದ್ದ ವಿವಿಧ ಬ್ಯಾಂಕ್, ಸಹಕಾರ ಸಂಘಗಳಲ್ಲಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
40 ಗ್ರಾಂ ತೂಕದ 3.20 ಲಕ್ಷ ರೂ. ಮೌಲ್ಯದ ಚಿನ್ನದ ಜೋಬಿನ ಸರ, 73 ಗ್ರಾಂ ತೂಕದ 5.84 ಲಕ್ಷ ರೂ. ಮೌಲ್ಯದ ಚಿನ್ನದ ಕಾಸಿ ತಾಳಿ ಸರ, 73 ಗ್ರಾಂ ತೂಕದ 5.84 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 6 ಗ್ರಾಂ ತೂಕದ 48 ಸಾವಿರ ರೂ. ಮೌಲ್ಯದ 3 ಚಿನ್ನದ ತಾಳಿ, 64 ಗ್ರಾಂ ತೂಕದ 5.12 ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲೆಸ್ ಸೇರಿದಂತೆ ಒಟ್ಟು 20.48 ಲಕ್ಷ ರೂ. ಮೌಲ್ಯದ 256 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಯು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಭಕ್ತರಿಗೆ ಯಾವುದೇ ಸಂಶಯ ಬರಬಾರದೆಂದು ದೇವರ ಮೇಲಿದ್ದ ಚಿನ್ನಾಭರಣಗಳನ್ನು ತೆಗೆದು, ಕೆಲವು ನಕಲಿ ಚಿನ್ನಾಭರಣಗಳನ್ನು ಹಾಕಿದ್ದಾನೆ. ಕಳವು ಮಾಡಿದ ಚಿನ್ನಾಭರಣಗಳನ್ನು ಆತ ಕುಂದಾಪುರ, ಬೈಂದೂರು ಭಾಗದ ವಿವಿಧ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಅಡವಿಟ್ಟಿದ್ದನು. ಪೊಲೀಸರು ವಶಪಡಿಸಿಕೊಂಡ ಚಿನ್ನಾಭರಣಗಳನ್ನು ಕೋಟ್ ಗೆ ಸಲ್ಲಿಸಿದ್ದಾರೆ.