ಕುಂದಾಪುರ, ಅ.06(DaijiworldNews/AA): ಮುಂದಿನ ದಿನಗಳಲ್ಲಿ ಪ್ರತೀ ಬೂತ್ ಮಟ್ಟದಿಂದಲೂ ನೈಜ ಕಾರ್ಯರ್ತರನ್ನು ಗುರುತಿಸಿ ಅವರಿಗೆ ನಾಯಕತ್ವ ಬಲವನ್ನು ನೀಡಿ ಪಕ್ಷ ಕಟ್ಟುವ ಕೆಲಸ ನಿರಂತರವಾಗಿ ನಡೆಯಲಿದೆ ಎಂದು ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಕಟ್ಬೇಲ್ತೂರಿನ ಅವರ ನಿವಾಸದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೂತನವಾಗಿ ಸೇರ್ಪಡೆಯಾದವರನ್ನು ಸ್ವಾಗತಿಸಿ ಮಾತನಾಡಿದ ಅವರು, ಇಂದು ಪಕ್ಷಕ್ಕೆ ಸೇರ್ಪಡೆಯಾದ ಹಿಂದುಳಿದ ವರ್ಗಗಳ ನಾಯಕರು ಹಾಗೂ ಅವರ ಬೆಂಬಲಿಗರ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ, ನನ್ನ ಮತ ಹೊಂದಿರುವ ಬೂತ್ಗಳಲ್ಲಿ ಈ ಹಿಂದಿನಂತೆ ಅಧಿಕ ಮತವನ್ನು ಪಡೆಯುವ ವಿಶ್ವಾಸಗಳು ಮೂಡಿದೆ ಎಂದರು.
ಕ್ಷೇತ್ರದ ಅಭಿವೃದ್ದಿಗಾಗಿ ಅನುದಾನವನ್ನು ನೀಡುವಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳನ್ನು ಕೋರಿಕೊಂಡಿದ್ದು, ಅನುದಾನ ದೊರಕುವ ನಿರೀಕ್ಷೆಗಳಿದೆ. ನಾನು ಶಾಸಕನಲ್ಲದಿದ್ದರೂ ನನ್ನಲ್ಲಿ ಯಾವುದೇ ಅಧಿಕಾರವಿಲ್ಲದಿದ್ದರೂ ಕ್ಷೇತ್ರದ ಜನತೆ ತೋರುತ್ತಿರುವ ಪ್ರೀತಿಯ ಋಣ ನನ್ನ ಮೇಲಿರುವುದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಪ್ರಯತ್ನ ನಿರಂತರವಾಗಲಿದೆ. ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯಿತಿ ಹಾಗೂ ಹೆಮ್ಮಾಡಿಯ ಪಂಚಗಂಗಾ ಸೊಸೈಟಿಯ ಚುನಾವಣೆಗಳು ನಡೆಯುವ ನಿರೀಕ್ಷೆ ಇದೆ. ಈ ಚುನಾವಣೆಯಲ್ಲಿ ಪಕ್ಷದ ಹಾಗೂ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಕಟಿಬದ್ದರಾಗಬೇಕು ಎಂದು ಅವರು ಹೇಳಿದರು.
ನೂತನವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಟ್ಬೇಲ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ್ ಪುತ್ರನ್ ಮಾತನಾಡಿ, ಅಭಿವೃದ್ದಿಯ ಕಾರ್ಯಗಳಿಗಾಗಿ ಪಕ್ಷಾತೀತವಾಗಿ ಸ್ಪಂದಿಸುವ ಮನೋಭಾವ ಇರುವ ಗೋಪಾಲ ಪೂಜಾರಿಯವರ ನಾಯಕತ್ವ ಒಪ್ಪಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಮುಂದಿನ ದಿನಗಳಲ್ಲಿ ಹಿತೈಷಿಗಳು ಹಾಗೂ ಸ್ನೇಹಿತರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಹೆಮ್ಮಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯು.ಸತ್ಯನಾರಾಯಣ್ ರಾವ್ ಹಾಗೂ ಕಟ್ಬೇಲ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ್ ಪುತ್ರನ್ ಅವರು, ತಮ್ಮ ಬೆಂಬಲಿಗರೊಂದಿಗೆ ಗೋಪಾಲ ಪೂಜಾರಿಯವರಿಂದ ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಹೆಮ್ಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಸುಧಾಕರ್ ಎನ್ ದೇವಾಡಿಗ, ಜಲಜ ಮೊಗವೀರ, ಶಕಿಲಾ, ಗೋಳಿಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಹೆಗ್ಡೆ ಇದ್ದರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ಕುಮಾರ್ ಶೆಟ್ಟಿ ಗುಡಿಬೆಟ್ಟು ಸ್ವಾಗತಿಸಿದರು. ಜಿಲ್ಲಾ ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ನಿರೂಪಿಸಿದರು.