ಕಾಸರಗೋಡು, ಅ.06(DaijiworldNews/AA): ಪತಿ ಹಾಗೂ ಪತ್ನಿಯ ನಡುವೆ ಕಲಹ ಉಂಟಾಗಿ, ಪತಿಯು ಪತ್ನಿಯನ್ನು ಕೊಲೆಗೈದ ಘಟನೆ ಅಂಬಲತ್ತರದಲ್ಲಿ ಇಂದು ಮುಂಜಾನೆ ನಡೆದಿದೆ.
ಅಂಬಲತ್ತರ ಕಣ್ಣೋತ್ನ ಎನ್.ಟಿ ಬೀನಾ(40) ಕೊಲೆಗೀಡಾದವರು.
ಕೃತ್ಯ ಎಸಗಿದ ಆರೋಪಿ ಪತಿ ದಾಮೋದರ (55)ನನ್ನು ಅಂಬಲತ್ತರ ಠಾಣಾ ಪೊಲೀಸರು ವಶಕ್ಕೆ ತೆಗದುಕೊಂಡಿದ್ದಾರೆ.
ಇಂದು ಮುಂಜಾನೆ ಈ ಕೃತ್ಯ ನಡೆದಿದ್ದು, ಬೆಳಗ್ಗೆ ವೇಳೆಗೆ ಬೆಳಕಿಗೆ ಬಂದಿದೆ. ಕೃತ್ಯದ ಬಗ್ಗೆ ಆರೋಪಿ ದಾಮೋದರನೇ ಸಮೀಪದ ಮನೆಯವರಿಗೆ ಮಾಹಿತಿ ನೀಡಿದ್ದು, ಪರಿಸರವಾಸಿಗಳು ಆತನ ಮನೆಗೆ ತೆರಳಿದಾಗ ಮೃತ ಬೀನಾ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಂಬಲತ್ತರ ಠಾಣಾ ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ತಡರಾತ್ರಿ ಇಬ್ಬರ ನಡುವೆ ಜಗಳ ವಾಗಿ ತಲೆಯನ್ನು ಗೋಡೆಗೆ ಬಡಿದು, ಕತ್ತು ಕೊಯ್ದು ಭೀಭತ್ಸ ರೀತಿಯಲ್ಲಿ ಕೊಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ದಂಪತಿಯ ಓರ್ವ ಪುತ್ರ ವಿಶಾಲ್ ದೆಹಲಿಯಲ್ಲಿ ಮೆಕ್ಯಾನಿಕ್ ಉದ್ಯೋಗದಲ್ಲಿದ್ದು, ಇಬ್ಬರು ಮಾತ್ರ ಮನೆಯಲ್ಲಿದ್ದರು. ಕಳೆದ ಒಂದೂವರೆ ವರ್ಷದಿಂದ ದಂಪತಿ ನಡುವೆ ವಿರಸ ಇತ್ತು ಎನ್ನಲಾಗಿದೆ.